ಅತ್ಯಾಚಾರ ಪ್ರಕರಣದ ಮೇಲಿನ ಚರ್ಚೆ: ಬಿಜೆಪಿ ಸದಸ್ಯರ ವರ್ತನೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಬೇಸರ

Update: 2021-09-22 16:54 GMT
 ಶಾಸಕಿ ಅಂಜಲಿ ನಿಂಬಾಳ್ಕರ್ 

ಬೆಂಗಳೂರು, ಸೆ.22: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಬುಧವಾರ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ನಮ್ಮ ಸರಕಾರಕ್ಕಿಂತ 2013-18ರವರೆಗೆ ಇದ್ದ ನಿಮ್ಮ ಸರಕಾರದ ಅವಧಿಯಲ್ಲೆ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಎನ್‍ಸಿಆರ್ ಅಂಕಿ ಅಂಶಗಳನ್ನು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮೇಜುಕುಟ್ಟಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ನಾವು ಇಲ್ಲಿ ರೇಪ್ ಎಂಬ ಗಂಭೀರ ವಿಷಯದ ಕುರಿತು ಮಾತನಾಡುತ್ತಿದ್ದೇವೆ. ಆದರೆ, ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು ತೋರುತ್ತಿರುವ ವರ್ತನೆ ಮನಸ್ಸಿಗೆ ಬಹಳ ನೋವುಂಟು ಮಾಡಿದೆ ಎಂದು ಹೇಳಿ ಶಾಸಕಿ ಸೌಮ್ಯಾರೆಡ್ಡಿ ಹಾಗೂ ರೂಪಕಲಾ ಅವರೊಂದಿಗೆ ಸದನದ ಬಾವಿಗಿಳಿದರು.

ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ತೆರಳಿದ ಬಳಿಕ ಮಾತನಾಡಿದ ಅಂಜಲಿ ನಿಂಬಾಳ್ಕರ್, ಇಲ್ಲಿ ಎಲ್ಲ ಪುರುಷರು ರೇಪ್ ಎನ್ನುವ ಪದವನ್ನ ಬಹಳ ಸುಲಭವಾಗಿ ಬಳಸ್ತಾ ಇದ್ದಾರೆ, ಆದರೆ ಅದರ ನೋವು ಯಾರಿಗೂ ಗೊತ್ತಿರುವುದಿಲ್ಲ ಎಂದರು.

ಗೃಹ ಸಚಿವರು ಮಾಧ್ಯಮಗಳಲ್ಲಿ ಕಾಂಗ್ರೆಸ್ ನವರು ನಮಗೆ ರೇಪ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ರೇಪ್ ಪದವನ್ನು ಬಳಸುವುದು ಬಹಳ ಸುಲಭ. ಆದರೆ, ರೇಪ್‍ಗೆ ಒಳಗಾದವರು ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾಗಿರುತ್ತಾರೆ. ಅದರ ನೋವು ಏನು ಅನ್ನೋದು ಸಂತ್ರಸ್ತೆ, ಅವರ ತಂದೆ, ತಾಯಿಗೆ ಮಾತ್ರ ಗೊತ್ತಿರುತ್ತೆ ಎಂದು ಭಾವುಕವಾಡಿ ಅವರು ಹೇಳಿದರು.

ರೇಪ್ ಅಂದರೆ ರೇಪ್ ಅಷ್ಟೇ, ಯಾವ ಸರಕಾರದ ಅವಧಿಯಲ್ಲಿ ಎಷ್ಟು ರೇಪ್ ಆಯಿತು ಅನ್ನೋದು ಮುಖ್ಯನಾ, ಯಾರ ಅವಧಿಯಲ್ಲಿ ಇಂತಹ ಘಟನೆ ನಡೆದರೂ ಅದು ಸರಕಾರಕ್ಕೆ ನಾಚಿಕೆಗೇಡಿನ ವಿಷಯ. ರೇಪ್ ಮಾಡುವ ವ್ಯಕ್ತಿಗೆ ಕಾನೂನು ಮತ್ತು ಪೊಲೀಸರ ಭಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಮಹಿಳೆಯರಿಗಾಗಿ ಸ್ಥಾಪಿಸಿರುವ ಸಹಾಯವಾಣಿ, ನಿರ್ಭಯಾ ನಿಧಿ ಎಲ್ಲ ಏನಾಯಿತು? ಸಿಸಿಟಿವಿ ಕ್ಯಾಮರಾಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ. ಇವತ್ತು ಲೈಂಗಿಕ ಶಿಕ್ಷಣ ನೀಡುವ ಕುರಿತು ಮಾತನಾಡುತ್ತಿದ್ದೇವೆ. ಆದರೆ, ಸಮಾಜದಲ್ಲಿ ಯಾವ ರೀತಿ ಬಾಳಬೇಕು ಅನ್ನೋ ಬಗ್ಗೆ ಹುಡುಗರಿಗೆ ಬೋಧನೆ ಮಾಡಬೇಕಾದ ಅಗತ್ಯವಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಯಾಕೆ ಎಫ್‍ಐಆರ್ ದಾಖಲು ಮಾಡಿಕೊಳ್ಳುವುದಿಲ್ಲ. ಒಬ್ಬ ವೈದ್ಯೆಯಾಗಿ ರೇಪ್ ಸಂತ್ರಸ್ತೆಯ ನೋವು ಏನು ಅನ್ನೋದನ್ನು ನಾನು ಬಲ್ಲೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News