`ಪ್ರಬುದ್ಧ ಯೋಜನೆ'ಗೆ ವ್ಯಾಪಕ ಪ್ರಚಾರ ನೀಡಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-09-22 17:48 GMT

ಬೆಂಗಳೂರು, ಸೆ. 22: `ರಾಜ್ಯದಲ್ಲಿನ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ನೀಡುವ ಧನಸಹಾಯ ನೀಡುವ `ಪ್ರಬುದ್ಧ ಯೋಜನೆ'ಗೆ ಇನ್ನೂ ವ್ಯಾಪಕ ಪ್ರಚಾರ ನೀಡಲು ಕ್ರಮ ವಹಿಸಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎ.ಹಾರಿಸ್ ಕೇಳಿದ ಪ್ರಶ್ನಗೆ ಉತ್ತರ ನೀಡಿದ ಅವರು, `ವಿದೇಶಗಳ 200 ವಿಶ್ವ ವಿದ್ಯಾಲಯಗಳಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಿವಿಗಳಿಗೆ ಕಳುಹಿಸಲಾಗುವುದು ಎಂದರು.

ಶೇ.55ರಷ್ಟು ಅಂಕ ಗಳಿಸಿದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದೇಶಿ ವಿವಿಗಳಲ್ಲಿ ಕಲಿಕೆಗೆ ನೆರವು ನೀಡಲಾಗುವುದು. ಈ ಸಾಲಿನಲ್ಲಿ ಒಟ್ಟು 106 ಮಂದಿ ವಿದ್ಯಾರ್ಥಿಗಳಿಗೆ ಪ್ರಬುದ್ಧ ಯೋಜನೆಯಡಿ ಸಹಾಯಧನ ನೀಡಲಾಗಿದೆ. ಈ ಯೋಜನೆಗೆ ಇನ್ನೂ ಹೆಚ್ಚು ಪ್ರಚಾರ ನೀಡಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಹಾರಿಸ್, `ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ಕಲಿಯಲು ಸಹಾಯ ಧನ ನೀಡುವ ಮಹತ್ವದ ಯೋಜನೆಗೆ ಕೇವಲ 106 ಜನ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಅಲ್ಲದೆ, ಬಹುತೇಕ ಜಿಲ್ಲೆಗಳಿಂದ ಈ ಯೋಜನೆಗೆ ಅರ್ಜಿಯನ್ನೆ ಹಾಕಿಲ್ಲ. ಹೀಗಾಗಿ ಈ ಯೋಜನೆ ಬಗ್ಗೆ ಜನರಲ್ಲಿ ಹೆಚ್ಚು ಪ್ರಚಾರ ಮಾಡಬೇಕು. ಆ ಮೂಲಕ ಈ ವರ್ಷದ ಮಕ್ಕಳು ಉನ್ನತ ಶಿಕ್ಷಣ ಕಲಿಕೆಗೆ ಸರಕಾರ ನೆರವಾಗಬೇಕು' ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News