ನಮಗೆ ಪೂಜೆ ಬೇಡ, ಗೌರವ ಬೇಕು: ಶಾಸಕಿ ಸೌಮ್ಯಾರೆಡ್ಡಿ

Update: 2021-09-22 17:51 GMT

ಬೆಂಗಳೂರು, ಸೆ.22: ನಮ್ಮ ದೇಶದ ಸಮಾಜದಲ್ಲಿ ಹೆಣ್ಣಿಗೆ ಸರಸ್ವತಿ, ಲಕ್ಷ್ಮಿ, ದುರ್ಗೆ ಎಂದು ಪೂಜಿಸುತ್ತಾರೆ. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಯಾವ ಪೂಜೆಯೂ ಬೇಡ, ಗೌರವ ಸಿಕ್ಕಿದರೆ ಸಾಕು ಎಂದು ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಧೈರ್ಯದಿಂದ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾದರೆ ಸಾಕು ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯ ಮಾಡಬೇಡಿ. ಇಂತಹ ಪ್ರಕರಣಗಳು ನಡೆದಾಗ ಹೆಣ್ಣು ಯಾವ ಬಟ್ಟೆ ಹಾಕಿದ್ದಳು, ಅಲ್ಲಿ ಯಾಕೆ ಹೋದಳು, ಯಾರ ಜೊತೆ ಹೋದಳು ಎಂದು ಪ್ರಶ್ನಿಸುತ್ತಾರೆ. ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಹೆಣ್ಣು ಮಕ್ಕಳು ಸಂಜೆ 6.30ರ ನಂತರ ಓಡಾಡಬಾರದು ಎಂದು ಮೈಸೂರು ವಿವಿ ಕುಲಪತಿ ಆದೇಶ ಮಾಡುತ್ತಾರೆ. ಇವರನ್ನು ಯಾಕೆ ಅಮಾನತ್ತು ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.

2020ನೆ ಸಾಲಿನಲ್ಲಿ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಎರಡನೆ ಸ್ಥಾನದಲ್ಲಿದೆ. ಲಾಕ್‍ಡೌನ್ ಆದ ನಂತರ ಗೃಹ ಹಿಂಸೆ ಪ್ರಕರಣಗಳು ಹೆಚ್ಚಾಗಿವೆ. ಉತ್ತರಪ್ರದೇಶದ ನಂತರ ಅತೀ ಹೆಚ್ಚು ದೌರ್ಜನ್ಯ ಪ್ರಕರಣಗಳು ನಮ್ಮ ರಾಜ್ಯದಲ್ಲಿ ವರದಿಯಾಗಿವೆ. ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು.

ಮಹಿಳಾ ಸಾಂತ್ವಾನ ಕೇಂದ್ರಗಳನ್ನು ಸರಕಾರ ಯಾಕೆ ಮುಚ್ಚುತ್ತಿದೆ. ನಿರ್ಭಯಾ ನಿಧಿಯನ್ನು ಎಷ್ಟು ಬಳಕೆ ಮಾಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸರಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಸೌಮ್ಯಾ ರೆಡ್ಡಿ ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, 2018 ರಿಂದ 2021ರ ಜುಲೈವರೆಗೆ 1300 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 6 ಜನರಿಗೆ ಮಾತ್ರ ಶಿಕ್ಷೆಯಾಗಿದ್ದು, 50 ಜನರು ಖುಲಾಸೆಯಾಗಿದ್ದಾರೆ. ಇನ್ನುಳಿದ ಪ್ರಕರಣಗಳು ಬಾಕಿ ಉಳಿದಿವೆ. ಅತ್ಯಾಚಾರ ಪ್ರಕರಣದ ಸಂತ್ರಸ್ತರಲ್ಲಿ ಶೇ.70ರಷ್ಟು ಮಂದಿ ದಲಿತ, ಹಿಂದುಳಿದ ಹಾಗೂ ದಮನಿತ ವರ್ಗದವರೇ ಆಗಿರುವುದು ಆತಂಕಕಾರಿ ಎಂದರು.

ಸರಕಾರ ಪ್ರತಿಯೊಂದು ತಾಲೂಕಿನಲ್ಲಿ ಒಂದು ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ ಮಾಡಿ, ಸಹಾಯವಾಣಿಯನ್ನು ಬಲಪಡಿಸಬೇಕು. ಸಮಾಜಕ್ಕೆ ಹೆದರಿ ಬಹಳ ಜನ ಇಂತಹ ಪ್ರಕರಣಗಳನ್ನು ಹೊರಗೆ ಬರಲು ಬಿಡುವುದಿಲ್ಲ. ಆದುದರಿಂದ, ಸಂತ್ರಸ್ತೆಯಾಗುವ ಮಹಿಳೆಯರಿಗೆ ಧೈರ್ಯ ತುಂಬುವಂತಹ ಕೆಲಸವನ್ನು ನಾವು ಮಾಡಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News