ಗೂಂಡಾ ಕಾಯ್ದೆಯಡಿ ಬಂಧನ ಆದೇಶ ರದ್ದುಗೊಳಿಸಿದ ಹೈಕೋರ್ಟ್ ನಿಂದ ರಾಜ್ಯ ಸರ್ಕಾರ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ದಂಡ

Update: 2021-09-23 11:28 GMT

ಬೆಂಗಳೂರು: ಸಾಮಾನ್ಯವೆಂಬಂತೆ ಅಫಿಡವಿಟ್‍ಗಳನ್ನು ಸಲ್ಲಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದಂಡ ವಿಧಿಸಿರುವ ಕರ್ನಾಟಕ ಹೈಕೋರ್ಟ್, ಗೂಂಡಾ ಕಾಯಿದೆಯಡಿ ಹೊರಡಿಸಲಾಗಿದ್ದ ಬಂಧನ ಆದೇಶವೊಂದನ್ನೂ ರದ್ದುಪಡಿಸಿದೆ.

ಇದೊಂದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯ ಪ್ರಕರಣವಾಗಿದೆ ಎಂದೂ ನ್ಯಾಯಾಲಯ ಹೇಳಿದೆ. ವ್ಯಕ್ತಿಯೊಬ್ಬನನ್ನು ಕಳೆದ ವರ್ಷದ ಡಿಸೆಂಬರ್ 14ರಿಂದ ಬಂಧನದಲ್ಲಿರಿಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯ ಮೇಲಿನಂತೆ ಹೇಳಿದೆಯಲ್ಲದೆ ದಂಡ ಮೊತ್ತವನ್ನು 30 ದಿನಗಳೊಗಾಗಿ ಅರ್ಜಿದಾರನಿಗೆ ಪಾವತಿಸುವಂತೆಯೂ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರು ಕರ್ನಾಟಕ ಗೂಂಡಾ ಕಾಯಿದೆ 1985 ಅನ್ವಯ ಹೊರಡಿಸಿದ್ದ ಹಾಗೂ ನಂತರ ಸರ್ಕಾರದಿಂದ ದೃಢೀಕರಿಸಲ್ಪಟ್ಟಿದ್ದ ಮೂರು ಬಂಧನ ಆದೇಶಗಳನ್ನು ಪ್ರಶ್ನಿಸಿ ಕಾರ್ತಿಕ್ ಎಂಬವರು ಅರ್ಜಿ ಸಲ್ಲಿಸಿದ್ದರು. ಜನವರಿ 12,2021ರಂದು ಈ ಬಂಧನಗಳ ವಿರುದ್ಧ ತಾನು ಮನವಿ ಸಲ್ಲಿಸಿದ್ದರೂ ಕಾಯಿದೆಯನ್ವಯ ಇರುವ ಸಲಹಾ ಮಂಡಳಿ ಅಥವಾ ರಾಜ್ಯ ಸರಕಾರ ಅದನ್ನು ಪರಿಶೀಲಿಸಿಲ್ಲವೆಂದೂ ಅರ್ಜಿದಾರರು ದೂರಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ರಾಜ್ಯ ಸರ್ಕಾರ ಮತ್ತು ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News