ವಿಧಾನಸಭೆ ಅಧಿವೇಶನ: ಮೀಸಲಾತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದಲೇ ಧರಣಿ ಸತ್ಯಾಗ್ರಹ

Update: 2021-09-23 11:57 GMT

ಬೆಂಗಳೂರು, ಸೆ. 23: `ಕುರುಬ ಸಮುದಾಯವನ್ನು ಎಸ್ಟಿಗೆ, ಎಸ್ಟಿ ಮೀಸಲಾತಿ ಶೇ.7.5ಕ್ಕೆ ಹೆಚ್ಚಳ, ಹಡಪದ, ಮಡಿವಾಳ ಜನಾಂಗ ಎಸ್ಸಿಗೆ ಹಾಗೂ ಪಂಚಮಸಾಲಿ ಸಮುದಾಯವನ್ನು ಹಿಂ.ವರ್ಗ `2ಎ' ಗೆ ಸೇರ್ಪಡೆಗೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರೇ ಸರಕಾರದ ವಿರುದ್ಧ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹ ನಡೆಸಿದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಯತ್ನಾಳ್, `ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು 6 ತಿಂಗಳ ಕಾಲಾವಕಾಶ ಕೊಡಿ ಎಂದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿದ್ದರು. ಆ ಗಡುವು ಮುಗಿದರೂ ಕೊಟ್ಟ ಭರವಸೆ ಈಡೇರಿಲ್ಲ. ಕೂಡಲೇ ಸರಕಾರ ನೀಡಿದ ಆಶ್ವಾಸನೆ ಪೂರೈಸಬೇಕು' ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಸದಸ್ಯರಾದ ಅರವಿಂದ ಬೆಲ್ಲದ್, ರಾಜುಗೌಡ, ಕಾಂಗ್ರೆಸ್‍ನ ಜೆ.ಎನ್.ಗಣೇಶ್ ಸೇರಿದಂತೆ ಇನ್ನಿತರ ಸದಸ್ಯರು, ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ರಾಮನ ಸೃಷ್ಟಿಗೆ ಮೂಲ ಕಾರಣಕರ್ತರಾದ ವಾಲ್ಮೀಕಿ ಸಮುದಾಯದ ನಿರ್ಲಕ್ಷ್ಯ ಸರಿಯಲ್ಲ. ಹೀಗಾಗಿ ಮೀಸಲಾತಿ ಬಗ್ಗೆ ಸರಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

`ನಿಮ್ಮ ಪ್ರಸ್ತಾಪಕ್ಕೆ ಉತ್ತರ ನೀಡಲು ಕಾನೂನು ಸಚಿವರು ಹಾಗೂ ಸಿಎಂ ಇಬ್ಬರೂ ಇಲ್ಲ. ಸಚಿವ ಸಿ.ಸಿ.ಪಾಟೀಲ್ ಉತ್ತರ ನೀಡಲಿದ್ದಾರೆ' ಎಂದು ಸ್ಪೀಕರ್ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಯತ್ನಾಳ್, ಸಿಎಂ ಅವರನ್ನು ಕೂಡಲೇ ಸದನಕ್ಕೆ ಕರೆಸಿ ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದರು.
ಪರಿಷತ್ ಕಲಾಪದಲ್ಲಿ ಪಾಲ್ಗೊಳ್ಳಲು ಸಿಎಂ ಮತ್ತು ಕಾನೂನು ಸಚಿವರು ಅಲ್ಲಿಗೆ ತೆರಳಿದ್ದಾರೆ. ಹೀಗಾಗಿ ಅವರು ಬಂದ ಬಳಿಕ ನಿಮ್ಮ ವಿಷಯಕ್ಕೆ ಉತ್ತರ ಕೊಡಿಸಲಾಗುವುದು ಎಂದು ಸ್ಪೀಕರ್ ರೂಲಿಂಗ್ ನೀಡಿದರು. ಇದರಿಂದ ತೃಪ್ತರಾಗದ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದ ಧರಣಿಗೆ ಮುಂದಾದರು. ಅವರಿಗೆ ಕಾಂಗ್ರೆಸ್ಸಿನ ಜೆ.ಎನ್.ಗಣೇಶ್ ಜೊತೆಯಾದರು.

ನಮಗೂ ಒಂದು ಪಾಸ್ ಕೊಡಿ: ಈ ವೇಳೆ ಎದ್ದು ನಿಂತ ಆಡಳಿತ ಪಕ್ಷದ ಸದಸ್ಯ ರಾಜೂಗೌಡ ಮಾತನಾಡಲು ಸ್ಪೀಕರ್ ಬಳಿ ಅವಕಾಶ ಕೋರಿದರು. ಸ್ಪೀಕರ್ ಅವಕಾಶ ನೀಡಲಿಲ್ಲ. ಕೆ.ಆರ್.ರಮೇಶ್ ಕುಮಾರ್ ಅವರಿಗೆ ಪದೇ ಪದೇ ಅವಕಾಶ ಕೊಡ್ತೀರಿ, ಅದೇ ರೀತಿ ನಮಗೂ ಒಂದು ಪಾಸ್ ಕೊಟ್ಟುಬಿಡಿ' ಎಂದು ಹೇಳಿದರು.

`ಪರಿಶಿಷ್ಟ ಪಂಗಡ(ವಾಲ್ಮೀಕಿ)ಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸುತ್ತಿದ್ದು, ಇದೀಗ ಮತ್ತೊಂದು ಸಮಿತಿ ರಚನೆ ಮಾಡಿ ವಿಳಂಬ ನೀತಿ ಸರಿಯಲ್ಲ. ಕೂಡಲೇ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು' ಎಂದು ಆಗ್ರಹಿಸಿದರು.

ಕೂಡಲೇ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, `ಸಿಎಂ, ಕಾನೂನು ಸಚಿವರು ಇಲ್ಲದಿದ್ದರೆ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುವುದಾಗಿ ಹೇಳಿದ್ದಾರೆ. ಸರಕಾರ ಎಂದರೆ ಸಾಮೂಹಿಕ ಜವಾಬ್ದಾರಿ. ಉತ್ತರ ಕೇಳಿ, ಇಲ್ಲವಾದರೆ ಸಿಎಂ ಬಂದ ಬಳಿಕ ಉತ್ತರ ಪಡೆಯಿರಿ. ಸದನದ ಸಮಯ ಹಾಳು ಮಾಡಬೇಡಿ' ಎಂದು ಸಲಹೆ ಮಾಡಿದರು. ಪ್ರತಿಪಕ್ಷ ನಾಯಕರ ಮನವಿ ಪುರಸ್ಕರಿಸಿದ ಯತ್ನಾಳ್, ಬೆಲ್ಲದ್ ಹಾಗೂ ಕಂಪ್ಲಿ ಗಣೇಶ್ ಧರಣಿಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News