'ನೀವು ಎಲ್ಲಿ ಓದಿಕೊಂಡು ಬಂದಿದ್ದೀರಿ, ನಿಮಗೆ ಯಾರು ಶಿಸ್ತು ಕಲಿಸುವುದು': ಜೆಡಿಎಸ್ ಶಾಸಕರ ವಿರುದ್ಧ ಸ್ಪೀಕರ್ ಅಸಮಾಧಾನ

Update: 2021-09-23 12:42 GMT

ಬೆಂಗಳೂರು, ಸೆ. 23: `ನೀವೆಲ್ಲ ಏನು ಓದಿಕೊಂಡು ವಿಧಾನಸಭೆಗೆ ಬಂದಿದ್ದೀರಿ. ಪದೇ ಪದೇ ಹೀಗೆ ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸ್ಪೀಕರ್ ಪೀಠದ ಸೂಚನೆಯನ್ನು ಉಲ್ಲಂಘಿಸಿ ಅಶಿಸ್ತಿನಿಂದ ವರ್ತಿಸುವ ಶಾಸಕರ ಹೆಸರುಗಳನ್ನು ಪಟ್ಟಿ ಮಾಡಿ ಹೇಳಬೇಕಾಗುತ್ತದೆ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯರಿಗೆ ಎಚ್ಚರಿಕೆ ನೀಡದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಸುರೇಶ್‍ಗೌಡ, `2021-22ರ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅತ್ಯಂತ ಹಿಂದುಳಿದ ತಾಲೂಕಿಗೆ ಅವರ ಅಪೆಂಡೆಕ್ಸ್ ಸಿ ಪ್ರಕಾರ ಅನುಪಾತ ಕಳಿಸಿಕೊಟ್ಟು, ಯಾವ ರೀತಿ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. 979 ಕೋಟಿ ರೂ.ಅನುದಾನ ಜಲಸಂಪನ್ಮೂಲ ಇಲಾಖೆಯಿಂದ ವಿವಿಧ ವಿಭಾಗಗಳಿಗೆ ಹಂಚಿಕೆಯಾಗಿದೆ. ನಂಜುಡಪ್ಪ ವರದಿ ಆಧಾರದಲ್ಲಿ ಆಗಿರುವ ತಾಲೂಕುವಾರು ಅನುದಾನ ಇದಾಗಿದೆ. ಆದರೆ, ಆಯಾ ತಾಲೂಕಿಗೆ ಕೊಟ್ಟ ಹಂಚಿಕೆಯಾದ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆ ಅಧಿಕಾರ ಕೊಟ್ಟವರು ಯಾರು? ಹಿಂದುಳಿಯದ ತಾಲೂಕಿಗೆ ಅನುದಾನ ಹಂಚಿಕೆ ಹೇಗೆ ಮಾಡಲಾಗುತ್ತಿದೆ. ಈ ಪ್ರಸ್ತಾಪಕ್ಕೆ ಸರಕಾರ ಕೂಡಲೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‍ನ ಕೃಷ್ಣಾರೆಡ್ಡಿ, ಅನ್ನದಾನಿ, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು, ತಮ್ಮ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಮತ್ತೊಂದು ಕ್ಷೇತ್ರಕ್ಕೆ ಕೊಡಲಿಕ್ಕೆ ಬರುವುದಿಲ್ಲ. ವರ್ಗಾವಣೆ ಮಾಡಿದ್ದು ಏಕೆ ಎಂದು ಗದ್ದಲ ಸೃಷ್ಟಿಸಿದರು.

ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, `ನೀವು ಎಲ್ಲಿ ಓದಿಕೊಂಡು ಬಂದಿದ್ದೀರಿ. ನಿಮಗೆ ಯಾರು ಶಿಸ್ತು ಕಲಿಸುವುದು? ನಿಮ್ಮ ಪಕ್ಷ ಏಕೆ ಹೀಗೆ ಆಗಿದೆ?' ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರನ್ನು ಉಲ್ಲೇಖಿಸಿ ಸಿಟ್ಟಾದರು. ಇದು ಮಹತ್ವದ ವಿಚಾರವಾಗಿದೆ. ಇದು ಯೋಜನಾ ಇಲಾಖೆಗೆ ಬರುತ್ತದೆ. ಉತ್ತರ ಕೊಡಿಸಿ ಎಂದು ಧ್ವನಿಗೂಡಿಸಿದರು.

ಈ ಹಂತದಲ್ಲಿ ಎದ್ದು ನಿಂತ ಸಚಿವ ಮುನಿರತ್ನ, `ನನಗೆ ಈ ವಿಚಾರವಾಗಿ ಇನ್ನೂ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರ ಕೊಡುತ್ತೇನೆ' ಎಂದು ತಿಳಿಸಿದರು. `ಸಚಿವರಿಗೆ ಮಾಹಿತಿ ಇಲ್ಲ' ಎಂದರೆ ಹೇಗೆ ಸರಕಾರ ತಕ್ಷಣವೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.

`ಕಲಾಪದ ನಿಯಮದ ಪ್ರಕಾರ ಶೂನ್ಯವೇಳೆ ಪ್ತಸ್ತಾಪಿತ ವಿಚಾರವನ್ನು ಸಚಿವರು ಸಿದ್ಧರಿದ್ದರೆ ಉತ್ತರ ಕೊಡುತ್ತಾರೆ. ಇಲ್ಲವಾದರೆ ಉತ್ತರ ತರಿಸಿ ನೀಡುತ್ತಾರೆ. ಸಚಿವರಿಗೆ ಮಾಹಿತಿ ಇಲ್ಲ. ಹೀಗಾಗಿ ಮಾಹಿತಿ ತರಿಸಿ ಕೊಡುತ್ತೇನೆ ಎಂದಿದ್ದಾರೆ. ಹೀಗಿದ್ದರೂ ಗದ್ದಲ ಉಂಟು ಮಾಡುವುದು ಸರಿಯಲ್ಲ' ಸ್ಪೀಕರ್ ರೂಲಿಂಗ್ ನೀಡಿ ಮುಂದಿನ ಕಲಾಪಕ್ಕೆ ಅವಕಾಶ ನೀಡಿದರು.

`ಕಲಾಪದಲ್ಲಿ ಪದೇ ಪದೇ ಅಶಿಸ್ತಿಗೆ ಪ್ರದರ್ಶಿಸುವವರ ಹೆಸರುಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಅದನ್ನು ಬಹಿರಂಗ ಮಾಡಬಾರದು ಎಂಬುದು ನನ್ನ ಅಭಿಪ್ರಾಯ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆ ಆ ಪಟ್ಟಿ ಬಹಿರಂಗ ಮಾಡಬೇಕಾಗುತ್ತದೆ. ಅಶಿಸ್ತಿನಿಂದ ವರ್ತಿಸುತ್ತಿರುವವರ ಪಟ್ಟಿ ನನ್ನ ಬಳಿ ಇದೆ. ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ'

-ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News