ವಿಧಾನಸಭೆಯಲ್ಲಿ ಲೋಕಸಭೆ ಸ್ಪೀಕರ್ ಭಾಷಣ ಸಂಸದೀಯ ವ್ಯವಸ್ಥೆಗೆ ವಿರುದ್ಧ: ಡಿ.ಕೆ.ಶಿವಕುಮಾರ್ ಆಕ್ರೋಶ

Update: 2021-09-23 13:26 GMT
ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆ.23: ಸಂಸದೀಯ ವ್ಯವಸ್ಥೆಯ ಪ್ರಕಾರ ವಿಧಾನಸಭೆಯಲ್ಲಿ ಸದಸ್ಯರು, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ. ಆದರೆ ರಾಜ್ಯ ಬಿಜೆಪಿ ಸರಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ಸಭೆ ಮಾಡುತ್ತಿರುವುದನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಇತಿಹಾಸ ಇರುವ ನಮ್ಮ ವಿಧಾನಸಭೆಯಲ್ಲಿ ರಾಜ್ಯ ಸರಕಾರ ಕೆಟ್ಟ ಪದ್ಧತಿ ಸೃಷ್ಟಿಸಲು ಹೊರಟಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಸೇರಿಸಿ ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್, ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ ಸಭಾಧ್ಯಕ್ಷರು ಭಾಷಣ ಮಾಡಲಿದ್ದಾರೆ ಎಂದುರು.

ಸಂಸದೀಯ ವ್ಯವಸ್ಥೆಯಲ್ಲಿ ಉಭಯ ಸದನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಆದರೂ ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ನಡೆಸಲು ಸರಕಾರ ಮುಂದಾಗಿದೆ. ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಆದ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು. 

ಈ ಕಾರ್ಯಕ್ರಮ ವಿಚಾರವಾಗಿ ಸರಕಾರ ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಮಾಡಿಲ್ಲ. ಆದರೂ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಈ ಸಭೆ ಮೂಲಕ ನಿಮ್ಮ ಸರಕಾರದ ಅವಧಿಯಲ್ಲಿ ಸಂಸದೀಯ ಮೌಲ್ಯ ಕುಸಿಯುತ್ತಿದೆ ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ. ಈ ಕಾರ್ಯಕ್ರಮ ನಡೆಸುವುದಾದರೆ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮಾಡಿ, ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ನಾವು ಸಲಹೆ ನೀಡಿದ್ದೆವು. ಸರಕಾರ ಇದನ್ನು ಒಪ್ಪದೇ, ವಿಧಾನಸಭೆಯಲ್ಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದೆ ಎಂದು ಅವರು ಕಿಡಿಗಾರಿದರು.

ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ನಮ್ಮ ಪಕ್ಷ ಚರ್ಚೆ ಮಾಡಿದೆ. ಈ ರೀತಿಯ ಕೆಟ್ಟ ಪದ್ಧತಿ ಆರಂಭಿಸುತ್ತಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ. ವಿಧಾನಸಭೆಯನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸ್ಪೀಕರ್ ಅವರಿಗೆ ಗೌರವಯುತವಾಗಿ ಮನವಿ ಮಾಡಿದರೂ ಸ್ಪಂದಿಸದೆ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದು ಅವರು ಟೀಕಿಸಿದರು.

ಆ ಸ್ಥಾನದಲ್ಲಿ ಕೂತು ಮಾತನಾಡಲು ರಾಜ್ಯಪಾಲರು, ರಾಷ್ಟ್ರಪತಿಗೆ ಮಾತ್ರವೇ ಅವಕಾಶವಿದ್ದು, ಬೇರೆಯವರು ಕೂರಲು ಅರ್ಹರಲ್ಲ. ಹೀಗಾಗಿ ನಾವು ಈ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News