ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಸಚಿವ ಪ್ರಭು ಚವ್ಹಾಣ್

Update: 2021-09-23 13:46 GMT
 ಸಚಿವ ಪ್ರಭು ಚವ್ಹಾಣ್

ಬೆಂಗಳೂರು, ಸೆ.22: ರಾಜ್ಯದಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಕಾಲುಬಾಯಿ ರೋಗಕ್ಕೆ  ವ್ಯವಸ್ಥಿತ ಲಸಿಕಾ ಅಭಿಯಾನ ನಡೆಸಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ರಾಜ್ಯದ 78 ತಾಲೂಕುಗಳ 419 ಹಳ್ಳಿಗಳಲ್ಲಿ ಕಾಲುಬಾಯಿ ರೋಗೊದ್ರೇಕವು 4475 ಜಾನುವಾರುಗಳಲ್ಲಿ ಕಂಡುಬಂದಿದೆ. ಉಳಿದ ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಆಗಿವೆ. ಪಶುಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಗಳು ನಿರಂತರವಾಗಿ ರೋಗೊದ್ರೇಕ ಕಂಡುಬಂದ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ತೀವ್ರವಾಗಿ ನಿಗಾ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 57 ರಾಸುಗಳು ಇಲ್ಲಿಯವರೆಗೆ ಮೃತಪಟ್ಟಿದ್ದು 4066 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖವಾಗಿವೆ. ಕಾಲುಬಾಯಿ ರೋಗ ಕಂಡುಬಂದ 5 ಕೀ.ಮಿ ವ್ಯಾಪ್ತಿಯಲ್ಲಿ ರಿಂಗ್ ವ್ಯಾಕ್ಸಿನ್ ನಡೆಸಲಾಗುತ್ತಿದೆ. ಸದ್ಯ 4 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದೆ. ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಪಶುವೈದ್ಯಾಧಿಕಾರಿಗಳು ಕಾಲುಬಾಯಿ ರೋಗವನ್ನು ಆದ್ಯತೆಯ ಮೇಲೆ ಪರಿಗಣಿಸಿ ರೋಗ ನಿಯಂತ್ರಣಕ್ಕೆ ಶ್ರಮವಹಿಸುವಂತೆ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಇಲಾಖೆಯ ಸಭೆ ನಡೆಸಿ ರೋಗ ಉಲ್ಬಣಗೊಳ್ಳದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರೈತರ ಜೀವನಾಧಾರವಾಗಿರುವ ರಾಸುಗಳ ಆರೋಗ್ಯಕ್ಕೆ ಯಾವುದೇ ಸಂದರ್ಭಗಳಲ್ಲಿ ವೈದ್ಯರು ಸನ್ನದ್ಧರಿದ್ದು ಆದ್ಯತೆ ಮೇಲೆ ಚಿಕಿತ್ಸೆ ನೀಡಲು ತಿಳಿಸಲಾಗಿದೆ. ಚಿಕಿತ್ಸೆ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೊರಿದ್ದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಸಾಲಿನ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ 17 ಸುತ್ತಿನ ಲಸಿಕಾ ಕಾರ್ಯಕ್ರಮ ನಡೆದಿದೆ.  ಈ ಮೊದಲು ರಾಜ್ಯದಲ್ಲಿ 60:40 ಅನುಪಾತದಲ್ಲಿ ಲಸಿಕೆ ನೀಡಲಾಗುತ್ತಿತ್ತು. ಆದರೆ ಈಗ ರಾಜ್ಯಗಳಿಗೆ ಕೇಂದ್ರ ಸರಕಾರ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡುತ್ತಿರುವುದರಿಂದ ವಿಳಂಬವಾಗಿದೆ. ಜೂನ್‍ನಲ್ಲಿ ಲಸಿಕಾ ಕಾರ್ಯಕ್ರಮ ನಡೆಯಬೇಕಿತ್ತು. ದೇಶದ ಎಲ್ಲ ರಾಜ್ಯಗಳಲ್ಲಿ ಏಕ ಕಾಲಕ್ಕೆ ಲಸಿಕಾ ಕಾರ್ಯಕ್ರಮ ನಡೆಸುವ ಉದ್ದೇಶ ಕೇಂದ್ರ ಸರಕಾರ ಹೊಂದಿರುವುದರಿಂದ ಲಸಿಕೆಯ ಪೂರೈಕೆಯಲ್ಲಿ ವಿಳಂಬವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

25 ಲಕ್ಷ ಡೋಸ್ ಪೂರೈಕೆ: ತಿಂಗಳ ಅಂತ್ಯದವರೆಗೆ ಕೇಂದ್ರ ಸರಕಾರದಿಂದ 25 ಲಕ್ಷ ಡೋಸ್ ಲಸಿಕೆ ಸರಬರಾಜು ಆಗುತ್ತಿದ್ದು ಅವುಗಳನ್ನು ರೋಗೊದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಪೂರೈಸಲು ಕ್ರಮ ವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News