ಬೆದರಿಕೆಯಿಂದ ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿದೆ: ಜಯಮೃತ್ಯುಂಜಯ ಸ್ವಾಮೀಜಿ

Update: 2021-09-23 15:18 GMT

ಬೆಳಗಾವಿ, ಸೆ.23: ಲಿಂಗಾಯತ ಪಂಚಮಸಾಲಿ ಸಮುದಾಯದವರನ್ನು ಸಿಎಂ ಮಾಡಿದರೆ ಧರ್ಮಸ್ಥಳಕ್ಕೆ ಹೋಗುವುದಾಗಿ ಒತ್ತಡ ಹಾಕಿದ್ದರು. ಅದಕ್ಕೆ ಬಿಜೆಪಿಯ ಕೇಂದ್ರ ನಾಯಕರು ಮಣಿದಿದ್ದರಿಂದಾಗಿ ಪಂಚಮಸಾಲಿಗಳಿಗೆ ಸ್ಥಾನ ತಪ್ಪಿರಬಹುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವೇಳೆ ನಮ್ಮ ಸಮಾಜದ ಬಸನಗೌಡ ಪಾಟೀಲ ಯತ್ನಾಳ್ ಅಥವಾ ಅರವಿಂದ ಬೆಲ್ಲದ ಅವರನ್ನು ಪರಿಗಣಿಸಲು ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬದಲಾಯಿತು ಎಂದು ತಿಳಿಸಿದರು.

ಧಮೇರ್ಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದಿದ್ದ ವೇಳೆವರೆಗೂ, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಬಳಿಕ ಬದಲಾಯಿತು ಎಂದರು.

'ನಾಯಕತ್ವ ಬದಲಾವಣೆಯಾದರೆ ಉ-ಕ ಲಿಂಗಾಯತ ಶಾಸಕರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದ್ದೆವು. ನಮ್ಮ ಬಯಕೆಯಂತೆ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ಸಿಕ್ಕಿದೆ. ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ಬೆಂಬಲಿಸಿದ ವ್ಯಕ್ತಿ ಮುಖ್ಯಮಂತ್ರಿ ಆದದ್ದು ಸಮಾಧಾನ ಹಾಗೂ ಸಂತಸ ತಂದಿದೆ. ಖಂಡಿತವಾಗಿಯೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ನಾನು ಮೀಸಲಾತಿಗಾಗಿ ಒತ್ತಾಯಿಸಿ ಪ್ರಾಮಾಣಿಕವಾಗಿ ಪಾದಯಾತ್ರೆ ಮಾಡಿದ್ದೆ. ಹೋರಾಟದ ವೇಳೆ ಹತ್ತು ಲಕ್ಷ ಜನ ಸೇರಿದ್ದರು. ಹೋರಾಟದಲ್ಲಿ ಯಾವ ಸಮುದಾಯದವರೂ ಇಷ್ಟೊಂದು ಪ್ರಮಾಣದಲ್ಲಿ ಸೇರಿದ್ದ ಇತಿಹಾಸ ಇರಲಿಲ್ಲ. ಲಿಂಗಾಯತರಲ್ಲಿ ಬಹುಸಂಖ್ಯಾತರೆಂದರೆ ಪಂಚಮಸಾಲಿಗಳು ಎನ್ನುವ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಹೋರಾಟದಿಂದ ಗೊತ್ತಾಗಿದೆ ಎಂದರು.

ಸರಕಾರ ನೀಡಿದ್ದ ಭರವಸೆ ಈಡೇರಿಲ್ಲ. ಗಡುವು (ಸೆ.15) ಮೀರಿದ್ದರಿಂದಾಗಿ ರಾಜ್ಯದಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ನಡೆಸುತ್ತಿದ್ದೇವೆ. ಅದು ಅ.1ರಂದು ಬೆಂಗಳೂರು ತಲುಪಲಿದೆ. ಅಷ್ಟರೊಳಗೆ ಬೇಡಿಕೆ ಈಡೇರಿಸಿದರೆ ಮುಖ್ಯಮಂತ್ರಿಗೆ ಕಲ್ಲುಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ. ಈಗ ನಡೆದಿರುವ ವಿಧಾನಮಂಡಲ ಅಧಿವೇಶನದಲ್ಲೇ ಮುಖ್ಯಮಂತ್ರಿ ಘೋಷಿಸಬೇಕು. ಇಲ್ಲದಿದ್ದರೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ 5ನೆ (ಪಂಚಮ) ಹಂತದ ಚಳವಳಿ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News