ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2021-09-23 15:20 GMT

ಬೆಂಗಳೂರು, ಸೆ.23: ಉಡುಪಿ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. 

ಅಪ್ರಾಪ್ತ ಬಾಲಕನನ್ನು ಪೀಠಾಧಿಪತಿಯಾಗಿ ನೇಮಿಸಿರುವ ಕ್ರಮ ಪ್ರಶ್ನಿಸಿ ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲತವ್ಯ ಆಚಾರ್ಯ ಹಾಗೂ ಇತರ 4 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿತು.  ಅರ್ಜಿದಾರರ ಕೋರಿಕೆ: ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಬಾಲಕನನ್ನು ನೇಮಿಸಲಾಗಿದೆ. ಈ ರೀತಿ ಅಪ್ರಾಪ್ತರನ್ನು ನೇಮಿಸುವುದು ಕಾನೂನು ಬಾಹಿರ. ಶಿರೂರು ಮಠದ ಆಡಳಿತಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸೋದೆ ಮಠಕ್ಕೆ ಯಾವುದೇ ಅಧಿಕಾರವಿಲ್ಲ. ಹೀಗಿದ್ದೂ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗಳು ಬಾಲಕನನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಶಿರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಲು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಅಧಿಕಾರವಿಲ್ಲ ಎಂದು ಘೋಷಿಸಬೇಕು. ಜತೆಗೆ ಅಪ್ರಾಪ್ತರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಕ್ರಮವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News