ಮದ್ರಸಾಗಳಿಗೆ ಏಜೆಂಟರ ಮೂಲಕ ಮಕ್ಕಳನ್ನು ಕಳುಹಿಸಬೇಡಿ: ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ

Update: 2021-09-23 15:37 GMT

ಬೆಂಗಳೂರು, ಸೆ.23: ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಮದ್ರಸಾಗಳಿಗೆ ದಾಖಲಿಸಲು ಬಯಸುವ ಪೋಷಕರು ಸ್ವತಃ ತಾವೇ ಅಥವಾ ಸಂಬಂಧಿಕರ ಜೊತೆ ಕಳುಹಿಸಿ ತಮಗಿಷ್ಟವಾದ ಮದ್ರಸಾಗಳಲ್ಲಿ ದಾಖಲಾತಿ ಮಾಡಲಿ. ಯಾವುದೆ ಕಾರಣಕ್ಕೂ ಮಕ್ಕಳನ್ನು ಏಜೆಂಟರ ಕೈಗೆ ಒಪ್ಪಿಸಬೇಡಿ ಎಂದು ರಾಬ್ತಾಯೆ ಮದಾರಿಸ್ ಎ ಇಸ್ಲಾಮಿಯಾ ಅರಬೀಯಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಮನವಿ ಮಾಡಿದ್ದಾರೆ.

ಗುರುವಾರ ನಗರದ ಟ್ಯಾನರಿ ರಸ್ತೆಯಲ್ಲಿರುವ ದಾರೂಲ್ ಉಲೂಮ್ ಶಾವಲೀವುಲ್ಲಾ ಮದ್ರಸಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಮದ್ರಸಾಗಳಲ್ಲಿ ದಾಖಲು ಮಾಡುವ ಉದ್ದೇಶದಿಂದ ಬಿಹಾರ ರಾಜ್ಯದಿಂದ 19 ಮಕ್ಕಳನ್ನು ರೈಲಿನಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಅಂತಹ ಮಕ್ಕಳನ್ನು ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ಮಕ್ಕಳ ಆರೈಕೆ ಕೇಂದ್ರಕ್ಕೆ ಪೊಲೀಸರು ಕಳುಹಿಸಿದ್ದಾರೆ ಎಂದರು.

ಮಕ್ಕಳ ಬಳಿ ಹಾಗೂ ಅವರನ್ನು ಕರೆದುಕೊಂಡು ಬರುತ್ತಿದ್ದ ವ್ಯಕ್ತಿ ಬಳಿ ಆ ಮಕ್ಕಳಿಗೆ ಸಂಬಂಧಿಸಿದ ಯಾವುದೆ ದಾಖಲಾತಿಗಳು ಇಲ್ಲದೆ ಇರುವುದರಿಂದ ಇಂತಹ ಘಟನೆ ಜರುಗಿದೆ. ಬೆಂಗಳೂರು ಆರಂಭದಿಂದಲೂ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಆದುದರಿಂದ, ದೇಶದ ವಿವಿಧ ಭಾಗಗಳಿಂದ ಮಕ್ಕಳು ಇಲ್ಲಿ ವಿದ್ಯಾಭ್ಯಾಸಕ್ಕೆ ಬರುತ್ತಿರುತ್ತಾರೆ ಎಂದು ಅವರು ಹೇಳಿದರು.

ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಇಂತಹ ಏಜೆಂಟರ ಮೂಲಕ ಮಕ್ಕಳನ್ನು ಕಳುಹಿಸಿದರೆ ಅನಾಹುತಗಳು ಸಂಭವಿಸಬಹುದು. ಈ ರೀತಿಯ ಘಟನೆಗಳಿಂದ ಮದ್ರಸಾಗಳು ಹಾಗೂ ಅಲ್ಲಿನ ಬೋಧನ ಕ್ರಮದ ಬಗ್ಗೆ ಸಮಾಜದ ಇತರ ವರ್ಗಗಳಲ್ಲಿ ಅಪನಂಬಿಕೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು.

ಮಕ್ಕಳನ್ನು ಮದ್ರಸಾಗಳಿಗೆ ದಾಖಲು ಮಾಡುವ ಮುನ್ನ, ಆ ಮದ್ರಸಾಗಳು ಮಾನ್ಯತೆಯನ್ನು ಹೊಂದಿದೆಯೇ? ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆಯೇ? ಎಂಬುದನ್ನು ಗಮನಿಸಬೇಕು. ಮಸೀದಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮದ್ರಸಾಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಅವರು ಹೇಳಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಶಂಶುದ್ದೀನ್ ಬಜ್ಲಿ ಮಾತನಾಡಿ, ನಮ್ಮ ಸಂಘಟನೆಯ ವತಿಯಿಂದ ರಾಜ್ಯದಲ್ಲಿ ಮಾನ್ಯತೆ ಪಡೆದಿರುವ, ಸ್ವಂತ ಕಟ್ಟಡದಲ್ಲಿ ನಡೆಯುತ್ತಿರುವ ಮದ್ರಸಾಗಳ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ, ಪೋಷಕರಿಗೆ ಆನ್‍ಲೈನ್ ಮೂಲಕವೇ ಮದ್ರಸಾಗಳ ಮಾಹಿತಿ ಲಭ್ಯವಾಗುತ್ತದೆ ಎಂದರು.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿರುವ ಮಕ್ಕಳನ್ನು ಆರೈಕೆ ಕೇಂದ್ರದಿಂದ ಬಿಡಿಸಿ, ಅವರ ಊರುಗಳಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಶಾಸಕ ರಿಝ್ವಾನ್ ಅರ್ಶದ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಮೌಲಾನ ಝೈನುಲ್ ಆಬಿದೀನ್, ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಉಪಸ್ಥಿತರಿದ್ದರು.

ಅನ್ಯ ರಾಜ್ಯಗಳಿಂದ ಮಕ್ಕಳನ್ನು ಶಿಕ್ಷಣದ ಉದ್ದೇಶಕ್ಕಾಗಿ ಕರೆತರುವ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಯಿಂದ ದೃಢೀಕರಣ ಪತ್ರವನ್ನು ಪಡೆಯಬೇಕಾಗುತ್ತದೆ. ಈ ಮಕ್ಕಳ ವಿಚಾರದಲ್ಲಿ ಆ ಪ್ರಕ್ರಿಯೆ ಪಾಲನೆ ಮಾಡದ ಹಿನ್ನೆಲೆಯಲ್ಲಿ ತೊಂದರೆಯಾಗಿದೆ. ಈಗಾಗಲೆ ಮಕ್ಕಳ ಪೋಷಕರು ಹಾಗು ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದ್ದು. ಮಕ್ಕಳನ್ನು ಶನಿವಾರ ರೈಲಿನ ಮೂಲಕ ಅವರ ಕುಟುಂಬದವರ ಬಳಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

-ಇಮ್ರಾನ್ ಪಾಷ, ಬಿಬಿಎಂಪಿ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News