ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-09-23 15:59 GMT
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ 

ಬೆಂಗಳೂರು, ಸೆ. 23: ‘ರಾಜ್ಯದಲ್ಲಿ ಸಂಭಾವ್ಯ ಕೋವಿಡ್ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಬಹುದೆಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಒಟ್ಟು 76 ಮಕ್ಕಳ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲೂ ಮಕ್ಕಳ ಆಸ್ಪತ್ರೆಗಳನ್ನು ಸಜ್ಜುಗೊಳಿಸಿ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾದರೆ ಅವರಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ' ಎಂದು ಹೇಳಿದರು.

‘2021ರ ಜೂನ್‍ನಲ್ಲಿ ಹೆಚ್ಚುವರಿಯಾಗಿ 85 ಮಕ್ಕಳ ತಜ್ಞರು, 194 ವೈದ್ಯಾಧಿಕಾರಿಗಳು, 398 ನರ್ಸ್‍ಗಳನ್ನು ನೇಮಕ ಮಾಡಿಕೊಂಡು ಅವರಿಗೆ ಕೋವಿಡ್ ಚಿಕಿತ್ಸೆ ಕುರಿತಂತೆ ತರಬೇತಿ ನೀಡಲಾಗಿದೆ. ಮೂರನೇ ಅಲೆ ತಡೆಗಟ್ಟಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ' ಎಂದು ಅವರು ವಿವರ ನೀಡಿದರು.

‘ರಾಜ್ಯದಲ್ಲಿ ಈಗಾಗಲೇ ಒಟ್ಟು 25 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ 500ಕ್ಕೂ ಹೆಚ್ಚು ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲಿರಿಸಲಾಗಿದೆ. ಅಲ್ಲದೆ, ಅಗತ್ಯವಿರುವ ಉಪಕರಣಗಳನ್ನು ಖರೀದಿಸಲಾಗಿದೆ. ಮಕ್ಕಳ ಐಸಿಯು ಒಳಗೊಂಡ ಹಾಸಿಗೆಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಾಪಿಸಿ ಮಕ್ಕಳಿಗಾಗಿ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ ಎಂದರು.

‘ಹಾಗೆಯೇ ಮಕ್ಕಳ ವೆಂಟಿಲೆಟರ್, ಸಿಪಿಎಪಿ ಸೇರಿದಂತೆ ಅಗತ್ಯ ಉಪಕರಣಗಳನ್ನು ಖರೀದಿಸಿದ್ದೇವೆ. ಇನ್ನು ಕೆಲವು ಉಪಕರಣಗಳು ಬರಬೇಕಿದೆ. ಇನ್ನು ಮೂರು ವಾರಗಳಲ್ಲಿ ಬರಲಿವೆ. ರಾಯಚೂರು ಸೇರಿದಂತೆ ಒಂದೆರಡು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಹಾಸಿಗೆ ಕೊರತೆಯಾಗಿತ್ತು. ಇದನ್ನು ವಿಪಕ್ಷ ನಾಯಕರು ತಮ್ಮ ಗಮನಕ್ಕೆ ತಂದಿದ್ದರು. ಅದನ್ನೆಲ್ಲಾ ಸರಿಪಡಿಸುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಯಾವುದೇ ಜಿಲ್ಲೆಗಳಲ್ಲಿ ಮಕ್ಕಳಿಗೆ ಹಾಸಿಗೆ ಕೊರತೆ ಪುನರಾವರ್ತನೆ ವರ್ತನೆ ಆಗದಂತೆ ಗಮನಹರಿಸಿದ್ದೇವೆಂದು ತಿಳಿಸಿದರು.

ಮೂರನೇ ಅಲೆ ಕುರಿತಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲೆಯ ಸಂಪೂರ್ಣ ಉಸ್ತುವಾರಿ ನಿರ್ವಹಿಸುವುದು, ಆರ್‍ಸಿಎಚ್ ಅಧಿಕಾರಿಗಳು ಮೂರನೇ ಅಲೆಯ ನೊಡೆಲ್ ಅಧಿಕಾರಿಯಾಗಿ ನೇಮಕ ಆಗಿರುತ್ತಾರೆ. ಆಸ್ಪತ್ರೆಗೆ ದಾಖಲಾದ ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿ ಮತ್ತು ಪೋಷಕರು ಕೋವಿಡ್ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಖಾತರಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ವಿಜಯಪುರದಲ್ಲಿ ಈಗಿರುವ 100 ಹಾಸಿಗೆಗಳ ಸಾಮರ್ಥ್ಯದ ತಾಯಿ-ಮಗುವಿನ ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮಥ್ರ್ಯಕ್ಕೆ ಮೇಲ್ದರ್ಜೆಗೇರಿಸಲು ಎನ್‍ಎಚ್‍ಎಂಗೆ ಪತ್ರ ಬರೆಯುವುದು ಎಂದು ಸಚಿವ ಸುಧಾಕರ್, ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಪ್ರಶ್ನಗೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News