ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-23 16:01 GMT

ಬೆಂಗಳೂರು, ಸೆ.23: ಸಂವಿಧಾನದ ಕಲಂ 371ಜೆ ಆಶೋತ್ತರಗಳನ್ನು ಪೂರೈಸಲು ಆ ಭಾಗದ ಜನರಿಗೆ ಆತ್ಮವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಿ, ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ‘ಕಲ್ಯಾಣ ಕರ್ನಾಟಕ’ವನ್ನು ನಿಜವಾದ ಕಲ್ಯಾಣ ಕರ್ನಾಟಕವನ್ನಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಚರ್ಚೆಗೆ ಉತ್ತರಿಸಿದ ಅವರು, ಇನ್ನು 10 ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‍ಡಿಬಿ) ರಚನೆ ಮಾಡಿ, ಕಾರ್ಯದರ್ಶಿ ಹಾಗೂ ಮಂಡಳಿಯ ಎಂಜಿನಿಯರ್‍ಗಳನ್ನು ನೇಮಕ ಮಾಡಲಾಗುವುದು ಎಂದರು.

ಪ್ರಸ್ತುತ ವರ್ಷ ಕೆಕೆಆರ್‍ಡಿಬಿ ಗೆ 1500 ಕೋಟಿ ರೂ.ನೀಡಿದ್ದೇವೆ. ಕಳೆದ ವರ್ಷ ನೀಡಿದ್ದ ಅನುದಾನದಲ್ಲಿ 500 ಕೋಟಿ ರೂ.ಖರ್ಚಾಗದೆ ಉಳಿದಿದೆ. ಈ ವರ್ಷದ ಅನುದಾನದಲ್ಲಿ ಈವರೆಗೆ 400 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ. ಪ್ರತಿವರ್ಷ ಹಣ ನೀಡಿ ಖರ್ಚು ಆಗದಿದ್ದರೆ ಏನು ಪ್ರಯೋಜನ. ಆಯಾ ವರ್ಷಕ್ಕೆ ಅನುದಾನ ಖರ್ಚಾಗಬೇಕು. ಸಮಯ ಹಾಗೂ ಹಣಕಾಸು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾಗಿ ಹಣ ಖರ್ಚು ಮಾಡಿದರೆ ಜನರಿಗೆ ಉಪಯೋಗವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

2000 ಕೋಟಿ ರೂ.ಗಳನ್ನು ಈ ವರ್ಷದ ಮಾರ್ಚ್ ಒಳಗೆ ಬಿಡುಗಡೆ ಮಾಡಲು ಜವಾಬ್ದಾರಿ ಹೊರತ್ತೇನೆ. ಹಣ ಖರ್ಚು ಮಾಡುವ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ನೇಮಕಾತಿ ಸ್ಥಗಿತಗೊಳಿಸಿ ಹೊರಡಿಸಿರುವ ಸುತ್ತೋಲೆಯಲ್ಲಿನ ನಿರ್ಬಂಧ ತೆಗೆದು, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಜೂರಾದ ಹುದ್ದೆಗಳ ನೇಮಕಾತಿ ಮಾಡುವುದರ ಜೊತೆಗೆ ಅಗತ್ಯವಿರುವ ಹುದ್ದೆಗಳನ್ನು ರಚನೆ ಮಾಡಿ ಅವುಗಳ ನೇಮಕಾತಿಯನ್ನು ಮಾಡಲಾಗುವುದು. 371ಜೆ ಅಡಿಯಲ್ಲಿ ಅನುಷ್ಠಾನಗೊಳ್ಳಬೇಕಿರುವ ಕಾರ್ಯಕ್ರಮಗಳ ನಿರ್ವಹಣೆ ಮಾಡುವ ವಿಭಾಗವನ್ನು ಗುಲ್ಬರ್ಗಕ್ಕೆ ಸ್ಥಳಾಂತರಿಸಲಾಗುವುದು. ಜೊತೆಗೆ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸುವ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News