×
Ad

‘10,265 ಕೋಟಿ ರೂ.ಗಳ ಪೂರಕ ಅಂದಾಜಿಗೆ ವಿಧಾನಸಭೆ ಅನುಮೋದನೆ’

Update: 2021-09-23 22:26 IST

ಬೆಂಗಳೂರು, ಸೆ.23: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2021-22ನೆ ಸಾಲಿನ 10.265 ಕೋಟಿ ರೂ.ಗಳ ಪೂರಕ ಅಂದಾಜುಗಳ ಮೊದಲನೆ ಕಂತಿನ ಬೇಡಿಕೆಗಳಿಗೆ ಗುರುವಾರ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

10,265 ಕೋಟಿ ರೂ.ಗಳ ಪೂರಕ ಅಂದಾಜಿನಲ್ಲಿ ರಾಜಸ್ವ ಖಾತೆಯಲ್ಲಿ 8728.51 ಕೋಟಿ ರೂ., ಬಂಡವಾಳ ಖಾತೆಯಲ್ಲಿ 1536.82 ಕೋಟಿ ರೂ.ಇದೆ. ಇದರಲ್ಲಿ ನಿವ್ವಳ ನಗದು ಹೊರ ಹರಿವು 6367 ಕೋಟಿ ರೂ.ಆಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಗೆ 1000 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 1700 ಕೋಟಿ ರೂ., ಆರೋಗ್ಯ ಇಲಾಖೆಗೆ 3300 ಕೋಟಿ ರೂ.ಒದಗಿಸಿದ್ದೇವೆ. ಇದಲ್ಲದೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ 127 ಕೋಟಿ ರೂ., ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿ ವೈದ್ಯಕೀಯ ಕಾಲೇಜುಗಳಿಗೆ 124 ಕೋಟಿ ರೂ., ಬಿಎಂಟಿಸಿ ನೌಕರರಿಗೆ 171 ಕೋಟಿ ರೂ., ಆಸ್ಪತ್ರೆ ಉನ್ನತೀಕರಣಕ್ಕೆ 150 ಕೋಟಿ ರೂ., ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಗೆ 150 ಕೋಟಿ ರೂ., ನಗರ ಸ್ಥಳೀಯ ಸಂಸ್ಥೆಗಳಿಗೆ 130 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಬಜೆಟ್‍ನಲ್ಲಿ ಜಿಎಸ್‍ಟಿ ಹರಿಹಾರದ ಮೊತ್ತವನ್ನು 12708 ಕೋಟಿ ರೂ.ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ಸರಕಾರ 18,109 ಕೋಟಿ ರೂ. ಹಂಚಿಕೆ ಮಾಡಲು ನಿಗದಿ ಮಾಡಿದೆ. ಈಗಾಗಲೆ 8542 ಕೋಟಿ ರೂ.ಬಂದಿದೆ. ಈ 6 ಸಾವಿರ ಕೋಟಿ ರೂ.ಗಳಿಗೆ ಜಿಎಸ್‍ಟಿ ಪರಿಹಾರ ಮೊತ್ತದಿಂದ ಅನುಕೂಲ ಆಗಬಹುದು ಎಂದು ಅವರು ಹೇಳಿದರು. 

ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 6000 ಕೋಟಿ ರೂ.ನಗದು ಹೊರ ಹರಿವು ಹೋಗುತ್ತೆ ಎಂದು ಹೇಳಿದ್ದೀರಿ. ಅದನ್ನು ಹೇಗೆ ನಿರ್ವಹಿಸುತ್ತೀರಾ. ಜಿಎಸ್‍ಟಿ ಪರಿಹಾರ ಸರಿಯಾಗಿ ಬಂದಿಲ್ಲ, ಜಿಎಸ್‍ಟಿ ಕಡಿಮೆಯಾಗಿದೆ, ಅಬಕಾರಿ ಆದಾಯ ಮಾತ್ರ ನಿಗದಿತ ಗುರಿ ತಲುಪಿದೆ. 

ಈ ವರ್ಷಕ್ಕೆ 4.57 ಲಕ್ಷ ಕೋಟಿ ರೂ.ಸಾಲ ಇದೆ. ನಾನು ಅಧಿಕಾರದಿಂದ ಇಳಿಯುವಾಗ ಸಾಲದ ಮೊತ್ತ 2.42 ಲಕ್ಷ ಕೋಟಿ ರೂ.ಇತ್ತು ಎಂದರು.

ಅನಗತ್ಯ ವೆಚ್ಚ ಕಡಿತ ಎಂದು ಹೇಳಿದ್ದೀರಾ. ನೀವು ಸಿಎಂ ಆದ ನಂತರ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದೀರಾ. ಅದಕ್ಕೆ ಹಣ ಬೇಕು, ಎಚ್ಚರಿಕೆಯಿಂದ ಕಾಲಿಡಿ. ತೆರಿಗೆ ಏಕಾಏಕಿ ಹೆಚ್ಚಾಗಲ್ಲ. 2022ನೆ ಸಾಲಿಗೆ ಜಿಎಸ್‍ಟಿ ಪರಿಹಾರ ನಿಲ್ಲಿಸುವುದಾಗಿ ಕೇಂದ್ರ ಸರಕಾರ ಹೇಳಿದೆ. ರಾಜ್ಯದ ಅಭಿವೃದ್ಧಿಗೆ ಹಣ ಇಲ್ಲದಂತಾಗುತ್ತದೆ. ಎಷ್ಟು ಅಂತ ಸಾಲ ಮಾಡಲು ಸಾಧ್ಯವಾಗುತ್ತೆ. ಈ ವರ್ಷ 20 ಸಾವಿರ ಕೋಟಿ ರೂ.ವಿತ್ತೀಯ ಕೊರತೆ ಇದೆ. ಪೂರಕ ಅಂದಾಜು ಮಾಡುವಾಗ ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವುದು ಒಳ್ಳೆಯದು ಎಂದು ಅವರು ಹೇಳಿದರು.

ನಂತರ ಮಾತು ಮುಂದುವರೆಸಿದ ಮುಖ್ಯಮಂತ್ರಿ, ವಿಜಯಭಾಸ್ಕರ್ ಸಮಿತಿ ವರದಿಯ ಶಿಫಾರಸ್ಸುಗಳನ್ನು ನವೆಂಬರ್ 1ರಿಂದ ಅನುಷ್ಠಾನಗೊಳಿಸುತ್ತೇವೆ. ಅನುಪಯುಕ್ತ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಹೊಸ ವಿಧಾನದಲ್ಲಿ ಜಿಎಸ್‍ಟಿಯಲ್ಲೂ ತೆರಿಗೆ ಪಡೆಯಲು ಆರಂಭ ಮಾಡಲಾಗಿದೆ. ಜಿಎಸ್‍ಟಿ ಪರಿಹಾರ ಮುಂದುವರೆಸುವಂತೆ ಎರಡು ಬಾರಿ ಭೇಟಿ ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದೇವೆ. ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲೂ ಎಲ್ಲ ರಾಜ್ಯ ಸರಕಾರಗಳು ಒತ್ತಾಯಿಸಿವೆ, ಕೊನೆಗೆ ಅದು ಒಪ್ಪಿಗೆ ಆಗಬಹುದು. ಅದರ ಅಗತ್ಯವೂ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News