ಕಬ್ಬಿನಗದ್ದೆಯಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲಿ ಪತ್ತೆ
Update: 2021-09-24 18:07 IST
ಬೆಳಗಾವಿ, ಸೆ. 24: ಎರಡು ವರ್ಷದ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಣ ಗ್ರಾಮದಲ್ಲಿ ನಡೆದಿದೆ.
ಕಬ್ಬಿನಗದ್ದೆಯಲ್ಲಿ ಈ ಬಾಲಕಿ ಸಿಕ್ಕಿದ್ದು, ಬೆತ್ತಲೆಯಾಗಿ ಸಿಕ್ಕಿರುವ ಬಾಲಕಿಯ ಮೈಮೇಲೆ ಸಿಗರೇಟ್‍ನಿಂದ ಸುಟ್ಟ ಗಾಯಗಳು ಪತ್ತೆಯಾಗಿವೆ. ಮೈತುಂಬಾ ಸುಟ್ಟ ಗಾಯ ಆಗಿದ್ದು, ಬಾಲಕಿಯು ಎರಡು ದಿನಗಳ ಕಾಲ ಸ್ಥಳದಲ್ಲಿ ನರಳಿದ್ದಾಳೆ.
ನರಳಾಟದ ಶಬ್ದ ಕೇಳಿ ಜಮೀನಿಗೆ ಹೋಗಿದ್ದ ರೈತರು ನೋಡಿದ್ದಾರೆ. ಬಳಿಕ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದು, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಾಲಕಿಗೆ ಚಿತ್ರಹಿಂಸೆ ನೀಡಲಾಗಿದ್ದು, ವಾಮಾಚಾರಕ್ಕೆ ಮಗು ಬಳಸಿಕೊಂಡು ದುಷ್ಕರ್ಮಿಗಳು ಇಂಥ ಪೈಶಾಚಿಕ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇಂಥ ಘೋರ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಜನರು ಆಗ್ರಹಿಸಿದ್ದಾರೆ