ಧಾರ್ಮಿಕ ಕಟ್ಟಡಗಳಿಗೆ ತಾತ್ಕಾಲಿಕ ರಕ್ಷಣೆ ಮಾತ್ರ: ಸಚಿವ ಜೆ.ಸಿ. ಮಾಧುಸ್ವಾಮಿ

Update: 2021-09-24 14:38 GMT

ಬೆಂಗಳೂರು, ಸೆ.24: ಕರ್ನಾಟಕ ಧಾರ್ಮಿಕ ಕಟ್ಟಡಗಳ(ಸಂರಕ್ಷಣೆ) ಮಸೂದೆ–2021 ಯಾವುದೇ ರೀತಿಯ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನೂ ಸಕ್ರಮಗೊಳಿಸುವುದಿಲ್ಲ. ಅಂತಹ ರಚನೆಗಳಿಗೆ ತಾತ್ಕಾಲಿಕ ರಕ್ಷಣೆಯನ್ನಷ್ಟೇ ಈ ಮಸೂದೆ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಶುಕ್ರವಾರ ಮಸೂದೆ ಮಂಡಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದರು. ಇದರಿಂದ ಸಮಾಜದಲ್ಲಿ ಶಾಂತಿಭಂಗ ಆಗುವ ಅಪಾಯ ಎದುರಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ತಾತ್ಕಾಲಿಕವಾಗಿ ರಕ್ಷಣೆ ಒದಗಿಸುವುದಕ್ಕೆ ಸೀಮಿತವಾಗಿ ಮಸೂದೆ ತರಲಾಗಿದೆ ಎಂದು ವಿವರಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಇನ್ನೂ ಬಾಕಿ ಇದೆ. ನ್ಯಾಯಾಲಯದ ಅಂತಿಮ ತೀರ್ಮಾನ ಬರಬೇಕಿದೆ. ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಅಥವಾ ರಾಜ್ಯ ಸರಕಾರದ ಮುಂದಿನ ತೀರ್ಮಾನದವರೆಗೆ ಅಂತಹ ಧಾರ್ಮಿಕ ಕಟ್ಟಡಗಳಿಗೆ ಈ ಮಸೂದೆ ರಕ್ಷಣೆ ನೀಡಲಿದೆ ಎಂದರು.

ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸರಕಾರ ನಿರ್ದಿಷ್ಟವಾಗಿ ಒಂದು ತೀರ್ಮಾನಕ್ಕೆ ಬರಲೇಬೇಕಿದೆ. ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಯೋಚನೆಯಿದೆ. ಅಲ್ಲಿಯವರೆಗೂ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡದಂತೆ ಈ ಮಸೂದೆ ತಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸದಾಗಿ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸದಂತೆಯೂ ಮಸೂದೆ ನಿಬರ್ಂಧಿಸಲಿದೆ ಎಂದು ಮಾಧುಸ್ವಾಮಿ ಹೇಳಿದರು.

2009ರಲ್ಲಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಇಡೀ ದೇಶಕ್ಕೆ ಅನ್ವಯಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸಬೇಕೆಂಬ ಅಧಿಕಾರಿಗಳ ತೀರ್ಮಾನದಿಂದ ಈಗ ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಸೌಹಾರ್ದ ಕಾಯುವುದಕ್ಕೆ ಪೂರಕವಾಗಿ ಮಸೂದೆ ತರಲಾಗಿದೆ ಎಂದರು.

ಧ್ವನಿಮತದ ಮೂಲಕ ಅಂಗೀಕಾರ: ಚರ್ಚೆಯ ಬಳಿಕ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ವಿಧಾನಸಭೆ ಈ ಮಸೂದೆಗೆ ಒಪ್ಪಿಗೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News