ಹಿಂ.ವರ್ಗಗಳ ಆಯೋಗದ ವರದಿಯನ್ನು ಆಧರಿಸಿ `ಪಂಚಮಸಾಲಿ ಮೀಸಲಾತಿ' ಕಲ್ಪಿಸಲು ಕ್ರಮ: ಸಿಎಂ ಬೊಮ್ಮಾಯಿ

Update: 2021-09-24 14:42 GMT

ಬೆಂಗಳೂರು, ಸೆ. 24: `ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಆಧರಿಸಿ ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಕ್ರಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ(ಸೆ.23) ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, `ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ 3 `ಬಿ'ಯಲ್ಲಿದ್ದು, ಆ ಸಮುದಾಯವನ್ನು ಪ್ರವರ್ಗ 2 `ಎ'ಗೆ ಸೇರ್ಪಡೆಗೆ ಬೇಡಿಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಆ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುತ್ತಿದೆ ಎಂದರು.

ಇತ್ತೀಚೆಗೆ ಕೇಂದ್ರ ಸರಕಾರ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ಮರಳಿಸುವ ಸಂವಿಧಾನ ತಿದ್ದುಪಡಿ ತಂದಿದೆ. ಅದರನ್ವಯ ಒಬಿಸಿ ಮೀಸಲಾತಿ ಪಟ್ಟಿ ತಯಾರಿಸುವ ಅಧಿಕಾರ ರಾಜ್ಯ ಹಿಂ.ವರ್ಗಗಳ ಆಯೋಗಕ್ಕೆ ವರ್ಗಾವಣೆಯಾಗಿದೆ. ಆಯೋಗ ಸಂಪೂರ್ಣ ಮಾಹಿತಿ ಸಂಗ್ರಹಣೆ ಅವಶ್ಯಕತೆ ಇದೆ ಎಂದರು.

ಮಹಾರಾಷ್ಟ್ರದ ಮರಾಠ ಮೀಸಲಾತಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆ ಹಿನ್ನೆಲೆಯಲ್ಲಿ ಆಯೋಗ ಪರಿಶೀಲನೆ ನಡೆಸಬೇಕಾಗಿದೆ. ಇಂದಿರಾ ಸಹಾನಿ ಮಾರ್ಗಸೂಚಿ ಪ್ರಕಾರ ಮೀಸಲಾತಿ ನೀಡುವ ಬಗ್ಗೆ ಕೆಲಸ ನಡೆಯುತ್ತಿದೆ. 15 ವಿವಿಧ ಸಮುದಾಯಗಳು ಮೀಸಲಾತಿಗೆ ಮನವಿ ಸಲ್ಲಿಸಿವೆ. ರಾಜ್ಯ ಹಿಂ.ವರ್ಗಗಳ ಆಯೋಗದ ವರದಿ ಬಂದ ಬಳಿಕ ಪರಿಶೀಲನೆ ಮಾಡಿ ಸರಕಾರ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News