`ಕೋವಿಡ್' ಉತ್ತರ ಕೇಳದೆ ಪಲಾಯನ ಮಾಡಿದ ಕಾಂಗ್ರೆಸ್: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟೀಕೆ

Update: 2021-09-24 14:58 GMT
ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಸೆ. 24: `ಕೋವಿಡ್ ಕುರಿತು ಸರಕಾರದ ಉತ್ತರ ಕೇಳದೆ ಪಲಾಯನ ಮಾಡಿರುವ ಕಾಂಗ್ರೆಸ್‍ನ ನಡೆ, ಜನರ ಆರೋಗ್ಯದ ಬಗ್ಗೆ ಪಕ್ಷಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಬಟಾಬಯಲು ಮಾಡಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷಗಳ ಗದ್ದಲ-ಕೂಗಾಟದ ಮಧ್ಯೆ ಉತ್ತರ ಮಂಡಿಸಿದ ಅವರು, `ಉತ್ತರ ಕೇಳುವ ಆಸಕ್ತಿ, ಧೈರ್ಯವೂ ಇಲ್ಲ. ಸತ್ಯವನ್ನು ಕೇಳದೆ ಅವರು ಪಲಾಯನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸದಸ್ಯರು, ತಾವು ಮಾಡಿರುವ ಎಲ್ಲ ಆರೋಪ ಸತ್ಯಕ್ಕೆ ದೂರ ಮತ್ತು ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕೋವಿಡ್ ಸಾವಿನಲ್ಲೂ ರಾಜಕೀಯ ಮಾಡ ಹೊರಟಿರುವ ಕಾಂಗ್ರೆಸ್‍ನ ಕೀಳು ಸಂಸ್ಕೃತಿಯನ್ನು ರಾಜ್ಯದ ಜನರು ಗಮನಿಸಿದ್ದು, ಜನರು ಕ್ಷಮಿಸುವುದಿಲ್ಲ' ಎಂದು ಟೀಕಿಸಿದರು.

ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ನಾವು ಎಷ್ಟು ಜನರನ್ನು ಕಳೆದುಕೊಂಡಿದ್ದೇವೆಯೋ ಅದಕ್ಕಿಂತ ಹೆಚ್ಚು ಜನರನ್ನು ಈ ಸಾಂಕ್ರಾಮಿಕದಲ್ಲಿ ಕಳೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿಪಕ್ಷಗಳಿಂದ ಜನತೆ ನಿರೀಕ್ಷಿಸುವುದು ಆಪಾದನೆ ಅಲ್ಲ, ಸಂವೇದನೆ ಎಂಬುದನ್ನು ಅರಿಯಬೇಕು. ಸಂಘರ್ಷ ಅಲ್ಲ ಸಹಕಾರ, ಪ್ರತಿಷ್ಠೆ ಅಲ್ಲ ಪ್ರಾಮಾಣಿಕತೆ, ರಾಜಕಾರಣ ಅಲ್ಲ ಅಂತಃಕರಣ ಎಂಬುದನ್ನು ತಿಳಿಯಬೇಕು ಎಂದು ಅವರು ಹೇಳಿದರು.

ಅಂಕಿ-ಅಂಶ ಮುಚ್ಚಿಟ್ಟಿಲ್ಲ: ಕೊರೋನದಿಂದ ಉಂಟಾದ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೇವೆಂದು ವಿಪಕ್ಷಗಳು ಆರೋಪ ಮಾಡುವುದು ಸತ್ಯಕ್ಕೆ ದೂರ. ಅಂಕಿ ಅಂಶಗಳನ್ನು ಮುಚ್ಚಿಡುವ ಯಾವುದೇ ಅವಶ್ಯಕತೆ ಸರಕಾರಕ್ಕೆ ಇಲ್ಲ. ಐಸಿಎಂಆರ್ ಮಾರ್ಗಸೂಚಿ ಪ್ರಕಾರವೇ ಎಲ್ಲ ಅಂಕಿ-ಅಂಶಗಳು ದಾಖಲಾಗುತ್ತವೆ. ನಾವೆಲ್ಲರೂ ಒಂದು ವ್ಯವಸ್ಥೆಯಲ್ಲಿ, ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಕ್ತ ವ್ಯವಸ್ಥೆಯಲ್ಲಿ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಲಸಿಕೆ: ಕೋವಿಡ್ ನಿಯಂತ್ರಣಕ್ಕೆ ವೇಗವಾಗಿ ಜನರಿಗೆ ಲಸಿಕೆ ನೀಡಲಾಗಿದೆ. ಸೆ.24ಕ್ಕೆ, 5,39,49,021 ಲಸಿಕೆ ನೀಡಲಾಗಿದೆ. ಸರಕಾರ ಒಟ್ಟು 4,89,11,050 ಲಸಿಕೆ ಪಡೆದಿದೆ. ಈ ಪೈಕಿ ಕೇಂದ್ರ ಸರಕಾರದಿಂದ 4,63,07,690 ಡೋಸ್ ಪೂರೈಕೆಯಾಗಿದೆ. ಆರೋಗ್ಯ ಸಿಬ್ಬಂದಿಗೆ ಮೊದಲ ಡೋಸ್‍ನಲ್ಲಿ ಶೇ.84.9ರಷ್ಟು, ಎರಡನೇ ಡೋಸ್‍ನಲ್ಲಿ ಶೇ.71.5, ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‍ನಲ್ಲಿ ಶೇ.108, ಎರಡನೇ ಡೋಸ್‍ನಲ್ಲಿ ಶೇ.78.3, 18-44 ವಯಸ್ಸಿನವರಿಗೆ ಮೊದಲ ಡೋಸ್‍ನಲ್ಲಿ ಶೇ.63.9, ಎರಡನೇ ಡೋಸ್‍ನಲ್ಲಿ ಶೇ.16.3, 45 ವಯಸ್ಸು ಮೇಲ್ಪಟ್ಟವರಲ್ಲಿ ಮೊದಲ ಡೋಸ್‍ನಲ್ಲಿ ಶೇ.91.6, ಎರಡನೇ ಡೋಸ್‍ನಲ್ಲಿ ಶೇ.52.8 ಪ್ರಗತಿಯಾಗಿದೆ. ಒಟ್ಟು ಮೊದಲ ಡೋಸ್ ಶೇ.76.9, ಎರಡನೇ ಡೋಸ್‍ನಲ್ಲಿ ಶೇ.31.5ರಷ್ಟು ಪ್ರಗತಿಯಾಗಿದೆ. 

ಪರಿಹಾರ ಶೀಘ್ರ: ಚಾಮರಾಜನಗರದಲ್ಲಿ ನಡೆದ ದುರಂತ ಅತ್ಯಂತ ದುರದೃಷ್ಟಕರ. ನ್ಯಾಯಮೂರ್ತಿ ಎ.ಬಿ.ಪಾಟೀಲ್ ಸಮಿತಿ ವರದಿಯನ್ನು ಸರಕಾರ ನಿರೀಕ್ಷಿಸುತ್ತಿದ್ದು ವರದಿ ಸರಕಾರದ ಕೈಸೇರಿದ ಕೂಡಲೇ ಸೂಕ್ತ ಕ್ರಮ ಜರುಗಿಸಲಾಗುವುದು. ಸರಕಾರ ಈಗಾಗಲೇ 200 ಕೋಟಿ ರೂ.ಮೀಸಲಿಟ್ಟಿದ್ದು ಶೀಘ್ರದಲ್ಲೇ ಪ್ರತಿಯೊಬ್ಬ ಮೃತ ಕುಟುಂಬಕ್ಕೆ 1ಲಕ್ಷ ರೂ.ಪರಿಹಾರ ತಲುಪಿಸಲಾಗುವುದು ಎಂದು ಸುಧಾಕರ್ ಉತ್ತರ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News