×
Ad

ರಾಷ್ಟ್ರೀಯ ಶಿಕ್ಷಣ ನೀತಿ; ಕಾಂಗ್ರೆಸ್ ವಿರುದ್ಧ ಸಚಿವ ಡಾ.ಅಶ್ವತ್ಥನಾರಾಯಣ ಕಿಡಿ

Update: 2021-09-24 21:00 IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಪಕ್ಷ ದ್ವಂದ್ವ ನೀತಿ ಅನುಸರಿಸುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದರು. 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಬೆಂಗಳೂರಿನಲ್ಲಿಂದು ಬಿಜೆಪಿ ಕೇಂದ್ರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಹಿಂದಿನ ಕಾಂಗ್ರೆಸ್ ಸರಕಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಪ್ರಹಾರ ನಡೆಸಿದರು. 

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರಾತುರವಾಗಿ ಜಾರಿ ಮಾಡಿಲ್ಲ. ಸಾಕಷ್ಟು ಪ್ರಕ್ರಿಯೆ ನಡೆದಿದೆ. ಅಪಾರ ಸಿದ್ಧತೆ ಮಾಡಿಕೊಂಡು ಜಾರಿಗೆ ತರಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಶಿಕ್ಷಣ ನೀತಿಯ ಬಗ್ಗೆ ಎಲ್ಲ ಪ್ರಕ್ರಿಯೆಗಳು ಶುರುವಾದವು. 2015ರಿಂದ ಶುರುವಾದ ಈ ಪ್ರಕ್ರಿಯೆಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವ ಪಕ್ಷದ ಸರಕಾರವಿತ್ತು? ಯಾರು ಮುಖ್ಯಮಂತ್ರಿ ಆಗಿದ್ದರು? ಎಂದು ಜನರಿಗೆ ಗೊತ್ತಿದೆ ಎಂದು ಸಚಿವರು ಕುಟುಕಿದರು. 

ಅಂದು ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳ ಜತೆ ಸಂವಹನ ನಡೆಸಲಾಯಿತು. ರಾಜ್ಯದಲ್ಲೂ ಈ ಪ್ರಕ್ರಿಯೆ ನಡೆಯಿತು. ಈ ಎಲ್ಲ ಮಹತ್ವದ ಪ್ರಕ್ರಿಯೆಗಳಲ್ಲೂ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಕ್ರಿಯವಾಗಿ ಭಾಗಿಯಾಗಿದ್ದರು. ಹಾಗಾದರೆ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಏನು ಮಾಡುತ್ತಿದ್ದರು? ಇವರಿಗೆ‌ ಈ ವಿಚಾರ ಗೊತ್ತಿರಲಿಲ್ಲವೇ? ಅವರದೇ ಸರ್ಕಾರ ಏನೆಲ್ಲ ಸಲಹೆಗಳನ್ನು ಕೊಟ್ಟಿತ್ತು ಎಂಬುದನ್ನು ಒಮ್ಮೆ ಕಣ್ತೆರೆದು ನೋಡಲಿ ಎಂದು ಉನ್ನತ ಶಿಕ್ಷಣ ಸಚಿವರು ಕಿಡಿ ಕಾರಿದರು. 

ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಇಂಥ ಅಭಿವೃದ್ಧಿಪರ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದ ಅವರು, ಪ್ರತಿಪಕ್ಷವಾಗಿ ಕಾಂಗ್ರೆಸ್ ಟೀಕೆ-ಟಿಪ್ಪಣಿ ಮಾಡುವುದು ಬಿಟ್ಟು ಸರಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದರು. 

ವಿಚಾರ ಸಂಕಿರಣ ದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ನಾಗೇಶ್, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಸೆಂಟ್ರಲ್ ಘಟಕದ ಅಧ್ಯಕ್ಷ ಮಂಜುನಾಥ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News