ತಡೆಯಾಜ್ಞೆ ತೆರವಿಗೆ ಸಿಎಂ ಜೊತೆ ಚರ್ಚಿಸಿ ಕ್ರಮ: ಸಚಿವ ಎಂಟಿಬಿ ನಾಗರಾಜ್

Update: 2021-09-24 15:39 GMT
 ಎಂಟಿಬಿ ನಾಗರಾಜ್

ಬೆಂಗಳೂರು, ಸೆ. 24: `ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿನ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಸುಪ್ರೀಂ ಕೋರ್ಟ್‍ನಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಸಿಎಂ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಅನಧಿಕೃತ ಬಡಾವಣೆಗಳ ವಾಸ ಮಾಡುತ್ತಿರುವ ಸಾರ್ವಜನಿಕರ ಹಿತದೃಷ್ಟಿಯಿಂದ ವಿದ್ಯುತ್, ರಸ್ತೆ, ಕುಡಿಯುವ ನೀರು ಮೂಲಸೌಕರ್ಯ ಕಲ್ಪಿಸಲಾಗಿದೆ. ಯಾವುದೇ ನಾಗರಿಕ ಸೌಕರ್ಯಗಳನ್ನು ತಡೆಹಿಡಿಯುವ ಉದ್ದೇಶ ಇಲ್ಲ' ಎಂದು ಹೇಳಿದರು.

`ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗಿ ಮಾಸ್ಟರ್ ಪ್ಲಾನ್ ಅನುಮೋದನೆಯಾದ ಪ್ರದೇಶಗಳಲ್ಲಿ 2013ರ ಮುಂಚಿತವಾಗಿ ಬಂದ ಬಡಾವಣೆಗಳನ್ನು ಸಕ್ರಮಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಅಕ್ರಮ-ಸಕ್ರಮ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದೆ. ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿದೆ.

ಈ ವಿಚಾರ 3 ವರ್ಷದಿಂದ ಸುಪ್ರೀಂಕೋರ್ಟ್‍ನಲ್ಲಿದ್ದು, ಅದನ್ನ ತೆರವು ಮಾಡಲು ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ತಡೆಯಾಜ್ಞೆಯಿಂದ `ಬಿ' ಖಾತೆಯನ್ನು `ಎ' ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ತಡೆಯಾಜ್ಞೆ ತೆರವು ಗೊಳಿಸಲು ಕ್ರಮ ವಹಿಸಲಾಗುವುದು ಎಂದರು.'

ಅಧಿಕಾರಗಳ ಬೇಜವಾಬ್ದಾರಿ: ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, `ಸ್ಥಳೀಯ ಮಟ್ಟದ ಅಧಿಕಾರಿಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅವರನ್ನು ಹತೋಟಿಗೆ ತರುವ ಬಗ್ಗೆ ಕ್ರಮ ವಹಿಸಿ. ಸಕ್ರಮ ಬಡಾವಣೆಯಲ್ಲಿ ಮನೆ ಕಟ್ಟಲು ಮಾಲಕ ಪರದಾಡುವಂತಾಗಿದೆ. ನಿವೇಶನ ಮಾಲಕ ಮೊದಲ ಮಹಡಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಸರಿಪಡಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News