ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಅಗತ್ಯ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2021-09-24 15:45 GMT

ಬೆಂಗಳೂರು, ಸೆ.24: ಭಾರತದ ಚುನಾವಣೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 1951ರ ಪ್ರಜಾಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದು ಹಾಗೂ ಸಂವಿಧಾನದ ಶಾಸನ ಸಭೆಗಳ ಕಲಾಪಗಳಿಗೆ ಸಂಬಂಧಿಸಿದ ಅನುಚ್ಛೇದಗಳ ತಿದ್ದುಪಡಿ ಮಾಡುವುದು ಅಗತ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.

ಶುಕ್ರವಾರ ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಸಭೆಯನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡುವ ಮುನ್ನ ಮಾತನಾಡಿದ ಅವರು, ಶಾಸನ ಸಭೆಯ ಅಧಿವೇಶನದ ಕಾಲಾವಧಿಯನ್ನು ಹೆಚ್ಚುಗೊಳಿಸಬೇಕು. ಈಗಿರುವ 3 ಅಧಿವೇಶನದ ಪದ್ಧತಿಯನ್ನು ನಾಲ್ಕು ಅಧಿವೇಶನಗಳಾಗಿ ಮಾರ್ಪಡಿಸಬೇಕು ಎಂದು ತಿಳಿಸಿದರು.

ಸದನದ ಕಾರ್ಯಕಲಾಪವನ್ನು ಬಹಿಷ್ಕರಿಸುವ ಹಾಗೂ ಮೊಟಕುಗೊಳಿಸುವ ಸದಸ್ಯರ ವಿರುದ್ಧ ತಕ್ಷಣವೇ ಕಠಿಣ ಕ್ರಮವನ್ನು ಜರುಗಿಸುವುದು(ಅಮಾನತುಗೊಳಿಸುವುದು, ಭತ್ತೆಗಳನ್ನು ಕಡಿತಗೊಳಿಸುವುದು ಇತ್ಯಾದಿ). ಕಾರ್ಯಕಲಾಪಗಳ ನಿಯಮಾವಳಿಗಳನ್ನು ಸೂಕ್ತ ತಿದ್ದುಪಡಿ ಮೂಲಕ ಹೆಚ್ಚು ಬಲಪಡಿಸಬೇಕು. ಸದನದಲ್ಲಿ ಅಡ್ಡಿ ಆತಂಕಗಳ ಬದಲಿಗೆ ಅರ್ಥಪೂರ್ಣ ಚರ್ಚೆಗಳಾಗಲಿ ಎಂದು ಕಾಗೇರಿ ಹೇಳಿದರು.

ಪ್ರತಿಪಕ್ಷಗಳು ಪ್ರತಿಪಾದಿಸುವ ವಿಷಯಗಳನ್ನು ಚರ್ಚಿಸುವ ಸಲುವಾಗಿ ಸದನದಲ್ಲಿ ಪ್ರತ್ಯೇಕವಾಗಿ ದಿನ ಹಾಗೂ ಸಮಯವನ್ನು ನಿಗದಿಪಡಿಸಬೇಕು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಂತದಿಂದ ಹಿಡಿದು ಶಾಸಕಾಂಗಕ್ಕೆ ಆಯ್ಕೆಯಾದ ಮೇಲೂ ರಾಜಕೀಯ ಶಿಕ್ಷಣ, ಸದನದಲ್ಲಿನ ನಡವಳಿಕೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವರ ನೈತಿಕ ಬೆಳವಣಿಗೆಗೆ ಮಹತ್ವ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಗುರುತರವಾದ ಪಾತ್ರವಹಿಸಬೇಕು ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ತ್ವರಿತ ಕ್ರಮದ ಅಗತ್ಯವಿದೆ. ಅದೇ ರೀತಿ, ವಿಧಾನಮಂಡಲ, ಸಂಸತ್ತಿನಲ್ಲಿ ಸದಸ್ಯರ ಶಿಸ್ತು, ಸಭ್ಯತೆ ಮತ್ತು ಸದನದ ಘನತೆ ಹಾಗೂ ಗೌರವದ ಹೊಣೆಯನ್ನು ಆಯಾ ಪಕ್ಷದ ನಾಯಕರು, ಸಚೇತಕರೇ ಹೊರಬೇಕು ಎಂಬುದು ನನ್ನ ಸಲಹೆ ಎಂದು ಕಾಗೇರಿ ಹೇಳಿದರು.

ವಿಧಾನಪರಿಷತ್ತಿನ ಸಭಾಪತಿ ಹಾಗೂ ನಾನು ಸೇರಿ ಈ ಸಭೆಯನ್ನು ಆಯೋಜಿಸಿ, ಲೋಕಸಭೆಯ ಸ್ಪೀಕರ್ ಅವರನ್ನು ಕರೆಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ’ ಕುರಿತು ಭಾಷಣ ಮಾಡಿಸುತ್ತಿದ್ದೇವೆ. ಈ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿರಬೇಕು ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ, ಅವರು ಈ ಸಭೆಯನ್ನು ಬಹಿಷ್ಕರಿಸಿರುವುದು ನೋವುಂಟು ಮಾಡಿದೆ.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News