×
Ad

ಕರಿಕೆ- ಸುಳ್ಯ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Update: 2021-09-24 22:41 IST

ಮಡಿಕೇರಿ ಸೆ.24 : ಕೊಡಗಿನಲ್ಲಿ ಶಾಲಾ, ಕಾಲೇಜುಗಳು ಆರಂಭಗೊಂಡಿವೆ, ಆದರೆ ಕೆಲವು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲದೆ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಬಂದೊದಗಿದೆ. ಜಿಲ್ಲೆಯ ಗಡಿಗ್ರಾಮ ಕರಿಕೆಯ ವಿದ್ಯಾರ್ಥಿಗಳು ಬಸ್ ಸಂಚಾರವಿಲ್ಲದೆ ಪಕ್ಕದ ಸುಳ್ಯದ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಪತ್ರ ಸಲ್ಲಿಸಿ ಗಮನ ಸೆಳೆದ ಕರಿಕೆ ಗ್ರಾ.ಪಂ ಅಧ್ಯಕ್ಷೆ ಕಲ್ಪನಾ ಜಗದೀಶ್ ಹಾಗೂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.

ಕರಿಕೆ- ಸುಳ್ಯ ಮಾರ್ಗದಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಖಾಸಗಿ ಬಸ್‍ಗಳು ಕೋವಿಡ್ ಪರಿಸ್ಥಿತಿಯ ಹಿನ್ನೆಲೆ ಸ್ಥಗಿತಗೊಂಡಿವೆ. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹತ್ತಿರ ಎನ್ನುವ ಕಾರಣಕ್ಕಾಗಿ ಕರಿಕೆಯ ಬಹುತೇಕ ವಿದ್ಯಾರ್ಥಿಗಳು ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಹೋಗಿ ಬರಲು ಬಸ್ ವ್ಯವಸ್ಥೆಯೇ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.  

 ಆದ್ದರಿಂದ ಜಿಲ್ಲಾಧಿಕಾರಿಗಳು ಈ ಬೇಡಿಕೆಯನ್ನು ತುರ್ತಾಗಿ ಪರಿಗಣಿಸಿ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಜನೆಗೆ ಸಹಕರಿಸಬೇಕೆಂದು ಈರ್ವರು ಮನವಿ ಮಾಡಿದರು.

ಚೆಕ್‍ಪೋಸ್ಟ್ ನಿಯಮ ಸಡಿಲಿಸಿ

ಕರಿಕೆ ಗ್ರಾಮ ಕೇರಳ ರಾಜ್ಯದ ಗಡಿ ಭಾಗದಲ್ಲಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಗೆ 70 ಕಿ.ಮೀ ದೂರವಾಗುತ್ತದೆ. ಈ ಕಾರಣದಿಂದ ಸ್ಥಳೀಯರು ತಮ್ಮ ಅಗತ್ಯತೆಗಳಿಗಾಗಿ ಪಕ್ಕದಲ್ಲೇ ಇರುವ ಕೇರಳಕ್ಕೆ ಹೋಗಿ ಬರುವುದು ಸಾಮಾನ್ಯವಾಗಿದೆ. ಆರೋಗ್ಯ ಸಂಬಂಧಿತ ಪರೀಕ್ಷೆಗಳಿಗೆ ಮತ್ತು ಔಷಧೋಪಚಾರಗಳಿಗೆ ಪಾಣತ್ತೂರನ್ನೇ ಅವಲಂಬಿಸಲಾಗಿದೆ. ಆದರೆ ಚೆಕ್‍ಪೋಸ್ಟ್ ನಲ್ಲಿ ಕಟ್ಟುನಿಟ್ಟಾಗಿ ನಿತ್ಯ ತಪಾಸಣೆ ಮತ್ತು ಆರೋಗ್ಯ ಪರೀಕ್ಷೆ ಮಾಡುವುದರಿಂದ ಕರಿಕೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚೆಕ್‍ಪೋಸ್ಟ್‍ನ ನಿಯಮವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಬೇಕೆಂದು ಕಲ್ಪನಾ ಜಗದೀಶ್ ಹಾಗೂ ಎನ್.ಬಾಲಚಂದ್ರ ನಾಯರ್ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News