ಪಿಟಿಸಿಎಲ್ ಕಾಯ್ದೆ ಕಾಲಮಿತಿ ಅಧಿನಿಯಮ: ತಿದ್ದುಪಡಿಗೆ ವಿಧಾನ ಮಂಡಲ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಶಿಫಾರಸ್ಸು

Update: 2021-09-24 17:27 GMT

ಬೆಂಗಳೂರು, ಸೆ. 24: `ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನು ರಕ್ಷಣೆ ಮಾಡಲು ಮತ್ತು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ರೂಪಿಸಿದ್ದ ಪಿಟಿಸಿಎಲ್ ಕಾಯ್ದೆ 1978 ನಿಯಮ 1979ರ ಕಾಯ್ದೆಗೆ ಕಾಲಮಿತಿ ಅಧಿನಿಯಮ ಅನ್ವಯಿಸುವುದಿಲ್ಲ ಎಂದು ತಿದ್ದುಪಡಿ ಮಾಡಬೇಕು' ಎಂದು ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ಮಧ್ಯೆ ವರದಿಯನ್ನು ಸಮಿತಿಯ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮಂಡಿಸಿದರು. `ಎಸ್ಸಿ-ಎಸ್ಟಿಗಳಿಗೆ ಸರಕಾರದಿಂದ ಮಂಜೂರಾದ ಜಮೀನುಗಳಿಗೆ ಸಂಬಂಧಿಸಿದಂತೆ ಅದರ ಮಾಲಕರು ನಿಧನ ಹೊಂದಿದ ನಂತರ ಅವರ ಮಕ್ಕಳಿಗೆ ಪೋಡಿ ಮತ್ತು ಹಕ್ಕು ಬದಲಾವಣೆ ಮಾಡಿ ಖಾತೆ ಮಾಡಿಕೊಡಲು ಸಂಬಂಧಪಟ್ಟ ತಹಶಿಲ್ದಾರರಿಗೆ ನಿರ್ದೇಶನ ನೀಡಬೇಕು'.

`ಎಸ್ಸಿ-ಎಸ್ಟಿ ವರ್ಗಕ್ಕೆ ಎಸ್ಸಿಪಿ-ಟಿಎಸ್ಪಿ ಯೋಜನೆಯ ಶೇ.24.1ರಷ್ಟು ಅನುದಾನವನ್ನು ಯಾವ ಇಲಾಖೆಗಳಲ್ಲಿ ದುರ್ಬಳಕೆ ಮಾಡಲಾಗುತ್ತದೆಯೋ ಅಂತಹವುಗಳನ್ನು ಪರಿಶೀಲಿಸಿ ಅನುದಾನ ಕಡಿತಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಬೇಡಿಕೆಯನ್ನು ಆಧರಿಸಿ ಇಲಾಖಾವಾರು ಅನುದಾನ ಒದಗಿಸಬೇಕು. ಎಲ್ಲ ಇಲಾಖೆಗಳಿಂದ ಅನುಮೋದನೆಗೊಂಡ ಕ್ರಿಯಾ ಯೋಜನೆ ಬಳಿಕ ಕಲ್ಯಾಣ ಇಲಾಖೆ ಅನುಮೋದನೆ ಬಳಿಕ ಅನುದಾನ ಬಿಡುಗಡೆ ಮಾಡಬೇಕು.

`ಅಲ್ಲದೆ, ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಜನಸಂಖ್ಯೆ ಆಧರಿಸಿ ಅನುದಾನ ಬಿಡುಗಡೆ ಮಾಡಬೇಕು. ಎಸ್ಸಿಪಿ-ಟಿಎಸ್ಪಿ ಅನುದಾನದಲ್ಲಿ ಮೀಸಲು ಕ್ಷೇತ್ರಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಎಸ್ಸಿ-ಎಸ್ಟಿ ವರ್ಗದ ಅಭಿವೃದ್ದಿ ದೃಷ್ಟಿಯಿಂದ ಇಲಾಖೆಗಳಲ್ಲಿ ಮೀಸಲಿಟ್ಟ 3.50 ಸಾವಿರ ಕೋಟಿ ರೂ.ಅನುದಾನವನ್ನು 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಳ, ವೈಯಕ್ತಿಕ ಸಾಲ ಸೌಲಭ್ಯ ಹೆಚ್ಚಳ, ಮೈಕ್ರೋ ಸಾಲವನ್ನು 50 ಸಾವಿರ ರೂ.ಗಳಿಂದ 1ಲಕ್ಷ ರೂ.ಗಳಿಗೆ, ಮನೆ ನಿರ್ಮಾಣ, ವಾಹನ ಖರೀದಿಗೆ ನೀಡುವ ಸಾಲವನ್ನು 5ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು' ಎಂದು ಸಮಿತಿ ಶಿಫಾರಸ್ಸು ಮಾಡಿದೆ.

`ವಿಶ್ವ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಸಿ-ಎಸ್ಟಿ ಅತಿಥಿ ಉಪನ್ಯಾಸಕರನ್ನು ಅರ್ಹತೆಯ ಆಧಾರದಲ್ಲಿ ಖಾಯಂ ನೇಮಕಾತಿ ಮಾಡಬೇಕು. ವಿವಿಗಳಲ್ಲಿನ ಬ್ಯಾಕ್‍ಲಾಗ್ ಹುದೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ವಿವಿ ಶಿಕ್ಷಕ/ಶಿಕ್ಷಕೇತರ ಅಧಿಕಾರಿ/ನೌಕರರಿಗೆ ಮೀಸಲಾತಿ ಅನ್ವಯ ಕಾಲಕಾಲಕ್ಕೆ ಮಾಡಿಕೊಳ್ಳಬೇಕು. ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ ನೌಕರರು ಹಾಗೂ ಇನ್ನಿತರ ನೌಕರರ ನೇಮಕಾತಿಯಲ್ಲಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮೀಸಲಾತಿ ಕಲ್ಪಿಸಬೇಕು' ಎಂದು ಸಮಿತಿ ಶಿಫಾರಸ್ಸು ಮಾಡಿದೆ.

`ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಕೆಲವೊಂದು ಇಲಾಖೆಗಳಲ್ಲಿ ಡೀಮ್ಡ್ ಎಕ್ಸ್‍ಪೆಂಡಿಚರ್ ಆಗಿ ಬಳಸಲಾಗುತ್ತಿದ್ದು, ಇದು ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಬೇಕು. ಎಸ್ಸಿ-ಎಸ್ಟಿಗಳಿಗೆ ಅನುಕೂಲವಾಗುವಂತೆ ಯೋಜನೆಗಳಿಗೆ ಬಜೆಟ್ ಹಂಚಿಕೆ ಮಾಡಬೇಕು'

-ಎಂ.ಪಿ.ಕುಮಾರಸ್ವಾಮಿ ವಿಧಾನ ಮಂಡಲ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News