ಕಲುಷಿತ ಕುಡಿಯುವ ನೀರು ಪೂರೈಕೆ : ಮಂಗಳೂರು ಪಾಲಿಕೆ ವಿರುದ್ಧ ಕ್ರಮಕ್ಕೆ ಕೆಎಸ್‌ಪಿಸಿಬಿಗೆ ಹೈಕೋರ್ಟ್ ನಿರ್ದೇಶನ

Update: 2021-09-24 17:52 GMT

ಬೆಂಗಳೂರು, ಸೆ.24: ಮಂಗಳೂರು ನಗರದಲ್ಲಿ ಕಲುಷಿತಗೊಂಡಿರುವ ಕುಡಿಯುವ ನೀರಿನ ವಿಚಾರದಲ್ಲಿ ಸಂವೇದನಾ ಶೂನ್ಯ ಧೋರಣೆ ಅನುಸರಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಕೆಎಸ್‌ಪಿಸಿಬಿ) ಹೈಕೋರ್ಟ್ ನಿರ್ದೇಶಿಸಿದೆ. ಮಂಗಳೂರಿನಲ್ಲಿ ಹರಿಯುವ ಫಲ್ಗುಣಿಯ ಉಪನದಿ ಕಲುಷಿತವಾಗಿರುವ ಕುರಿತು ಕೆಎಸ್‌ಪಿಸಿಬಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸುದೀರ್ಘ ಕಾಲದಿಂದ ತ್ಯಾಜ್ಯ ಸುರಿಯುತ್ತಿರುವ ಪ್ರದೇಶವೊಂದರ ಕಾರಣದಿಂದಾಗಿ ಮಂಗಳೂರಿನ ನಿವಾಸಿಗಳು ಬಲವಂತವಾಗಿ ಕಲುಷಿತ ನೀರನ್ನು ಕುಡಿಯುವಂತಾದಾಗಲೂ ಈ ನ್ಯಾಯಾಲಯವು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಸರಕಾರಿ ವಕೀಲರು ತ್ಯಾಜ್ಯ ಪ್ರದೇಶವು ಸುಮಾರು 30-40 ವರ್ಷಗಳಷ್ಟು ಹಳೆಯದು ಮತ್ತು ಅದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದರು. ಮಳವೂರು ನೀರು ಶುದ್ಧೀಕರಣ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮುಗ್ರೋಡಿ ಕನ್‌ಸ್ಟ್ರಕ್ಷನ್ ಎಂಬ ಖಾಸಗಿ ಸಂಸ್ಥೆಯ ಪರೀಕ್ಷಾ ವರದಿಯನ್ನು ಪೀಠಕ್ಕೆ ಸರಕಾರವು ಸಲ್ಲಿಸಿತು. ಆದರೆ, ಪೀಠವು ಖಾಸಗಿ ಸಂಸ್ಥೆಯ ವರದಿಯನ್ನು ನಿರಾಕರಿಸಿತು.

ಮಂಗಳೂರು ನಗರದಲ್ಲಿ ನೀರನ್ನು ವಿಶ್ಲೇಷಿಸುವ ಕೆಲಸವನ್ನು ಯಾವ ಕಾನೂನಿನ ಅಡಿಯಲ್ಲಿ ಮುಗ್ರೋಡಿ ಕನ್‌ಸ್ಟ್ರಕ್ಷನ್‌ಗೆ ವಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನ್ಯಾಯಾಲಯವು ನಿಜವಾಗಿಯೂ ವಿಫಲವಾಗಿದೆ ಎಂದು ಪೀಠ ಹೇಳಿತು.

ಎಂಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೀಠವು ತಪ್ಪು ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದೆ. ನೀರಿನ ಗುಣಮಟ್ಟ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ವರದಿ ಸಲ್ಲಿಸುವಂತೆ ಕೆಎಸ್‌ಪಿಸಿಬಿ ಮತ್ತು ಎಂಸಿಸಿಗೆ ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದೆ. ಅಣೆಕಟ್ಟಿನ ಪ್ರವೇಶ ಮತ್ತು ನಿರ್ಗಮನದಲ್ಲಿ ನಿವಾಸಿಗಳಿಗೆ ಸರಬರಾಜು ಮಾಡಿದ ನೀರನ್ನು ಪರೀಕ್ಷಿಸಲು ಕೆಎಸ್‌ಪಿಸಿಬಿಗೆ ಪೀಠವು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News