×
Ad

ಮತದಾರರ ಪಟ್ಟಿ ಪರಿಷ್ಕರಣೆ: ನಿಬಂಧನೆ ಪಾಲಿಸಲು ಹೈಕೋರ್ಟ್ ನಿರ್ದೇಶನ

Update: 2021-09-24 23:42 IST

ಬೆಂಗಳೂರು, ಸೆ.24: ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಕೈಬಿಡಲು ಮತ್ತು ಪುನರ್ ಸೇರ್ಪಡೆ ಮಾಡುವ ವಿಚಾರದಲ್ಲಿ ಕಟ್ಟುನಿಟ್ಟಾಗಿ ನಿಬಂಧನೆಗಳನ್ನು ಪಾಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.

ನಗರದ ಸರಕಾರೇತರ ಸಂಸ್ಥೆ ವೈಟ್‌ಫೀಲ್ಡ್ ರೈಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ವರ್ಗಾವಣೆ ಅಥವಾ ಇನ್ನಾವುದೇ ಮಾರ್ಪಾಡು ಮಾಡುವ ಕುರಿತು ಸಲ್ಲಿಸಿದ ಮನವಿಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಸಂಬಂಧ ಕಾರ್ಯ ವಿಧಾನ ರೂಪಿಸುವ ಕುರಿತು ನಿರ್ದೇಶನ ನೀಡುವಂತೆ ಕೋರಿ 2018ರಲ್ಲಿ ವೈಟ್‌ಫೀಲ್ಡ್ ರೈಸಿಂಗ್ ಮನವಿ ಸಲ್ಲಿಸಿತ್ತು.

ಇಸಿಐ ಪರ ವಾದಿಸಿದ್ದ ವಕೀಲರು, ಮತದಾರರ ಪಟ್ಟಿಯಲ್ಲಿ ಮತದಾರರ ಸೇರ್ಪಡೆ ಮತ್ತು ತೆಗೆದು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯಲ್ಲಿ ಅಹವಾಲನ್ನು ಪರಿಶೀಲಿಸುವ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳ ಸಂಖ್ಯೆಯನ್ನು ನಿರ್ಧರಿಸಲು ಯಾವುದೇ ವಿಧಾನವನ್ನು ಅಳವಡಿಸಲಾಗಿಲ್ಲ. ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನಿರ್ದಿಷ್ಟ ಕಾಲಮಿತಿಯಲ್ಲಿ ಅಹವಾಲನ್ನು ಪರಿಹರಿಸಲಾಗಿಲ್ಲ. ಮತದಾರರ ಪಟ್ಟಿಯಲ್ಲಿ ಮಾರ್ಪಾಡು ಕುರಿತು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸ್ವೀಕೃತಿ ಪ್ರತಿ ನೀಡಲು ನಿರ್ದೇಶಿಸಬೇಕು ಎಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News