ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಜನರಿಗೆ 40,000 ರೂ. ಬೆಲೆಯ ಉಚಿತ ಪಾನಿ ಪುರಿ ನೀಡಿದ ಪಾನಿಪುರಿ ವಾಲ

Update: 2021-09-25 10:28 GMT
Photo: thequint.com

ಭೋಪಾಲ್: ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಭೋಪಾಲ್‍ನ ಕೋಲಾರ್ ಪ್ರದೇಶದಲ್ಲಿ ಪಾನಿ ಪುರಿ ಸ್ಟಾಲ್ ನಡೆಸುವ ಆಂಚಲ್ ಗುಪ್ತಾ ಎಂಬವರು ರೂ. 40,000 ಬೆಲೆಯ ಪಾನಿ ಪುರಿಗಳನ್ನು ಜನರಿಗೆ ಉಚಿತವಾಗಿ ಹಂಚಿ ಸಂಭ್ರಮಿಸಿದ್ದಾರೆ. ಹೆಣ್ಣು ಮಗು ಜನಿಸಿತೆಂದು ತಾತ್ಸಾರ ತೋರುವ ಘಟನೆಗಳು ಈಗಲೂ ನಡೆಯುತ್ತಿರುವ ಸಂದರ್ಭದಲ್ಲಿ ಈ ಪಾನಿ ಪುರಿ ಮಾರಾಟಗಾರನ ಈ ಸಂಭ್ರಮ ಸಮಾಜಕ್ಕೆ ಒಂದು ಮುಖ್ಯ ಸಂದೇಶವೊಂದನ್ನು ಸಾರುತ್ತಿದೆ ಎಂದು thequint.com ವರದಿ ಮಾಡಿದೆ.

"ಬೇಟಿ ಹೈ, ತೋ ಕಲ್ ಹೈ'' (ಮಗಳು ಇದ್ದರೆ ಭವಿಷ್ಯವಿದೆ) ಎಂದು ತನ್ನ ಸ್ಟಾಲ್‍ಗೆ ಉಚಿತ ಪಾನಿ ಪುರಿ ಸವಿಯಲು ಬಂದ ಜನರ ಗುಂಪಿಗೆ ಗುಪ್ತಾ ಹೇಳಿದ್ದಾರೆ.

ಎಂಟನೇ ತರಗತಿಯಲ್ಲಿರುವಾಗಲೇ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದ 30 ವರ್ಷದ ಗುಪ್ತಾ, "ಹೆಣ್ಣು ಮಗು ಹುಟ್ಟಿರುವುದರಿಂದ ತಮ್ಮ ಕನಸು ನನಸಾಗಿದೆ. ಮದುವೆಯಾದಾಗಿನಿಂದ ಹೆಣ್ಣು ಮಗುವಿಗೆ ಹಂಬಲಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ನಮಗೊಂದು ಗಂಡು ಮಗು ಜನಿಸಿತ್ತು,'' ಎಂದು ಹೇಳಿದ್ದಾರೆ.

ಉಚಿತ ಪಾನಿ ಪುರಿ ಸವಿದವರೆಲ್ಲರೂ ಗುಪ್ತಾ ಅವರನ್ನು ಅಭಿನಂದಿಸಿದ್ದಾರೆ. ಆದರೆ ಉಚಿತ ಪಾನಿ ಪುರಿ ಸವಿಯುವ ಭರದಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News