ಪ್ರತಿ ನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ

Update: 2021-09-26 07:06 GMT

ಬೆಳಗಾವಿ : ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ, ಅದು  ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ  ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ  ಇ- ಗ್ರಂಥಾಲಯ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿಯಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನ ಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ.  ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ  ಎಂದರು. 

ಜ್ಞಾನ ನೀಡುವುದು  ಮತ್ತು ಪಡೆಯುವುದು ಅತ್ಯಗತ್ಯ. ಜ್ಞಾನ ಮತ್ತು ಧ್ಯಾನ ಇವೆರಡು ಬದುಕಿಗೆ ಸಾರ್ಥಕತೆ ಕೊಡುವ, ಅರ್ಥವನ್ನು ಕೊಡುವ, ಪರೋಪಕಾರ ಮಾಡುವ ಗುಣವನ್ನು ಕೊಡುವ ಪ್ರಮುಖ ಮಾರ್ಗವಾಗಿದೆ. ಜ್ಞಾನ ಮತ್ತು ಧ್ಯಾನಗಳನ್ನು ಪಡೆದು ಅದನ್ನು ಸಮಾಜಕ್ಕೆ ಹಂಚಬೇಕು ಎಂಬ ಕೆಲಸವನ್ನು ಗ್ರಂಥಾಲಯ ಮಾಡುತ್ತದೆ. ಬೆಳಗಾವಿ  ಕಾಸ್ಮೋಪಾಲಿಟನ್  ನಗರ. ಇಡೀ ಭಾರತವೇ ಬೆಳಗಾವಿಯಲ್ಲಿದೆ. ಬೆಳಗಾವಿ ಜನತೆ ಕನ್ನಡ ಮತ್ತು ರಾಷ್ಟ್ರದ ಬಗ್ಗೆ  ಅಭಿಮಾನವಿರುವವರು. ಸಂಕುಚಿತ ಭಾವನೆ ಮಾತ್ತು ವಿಚಾರಗಳಿಗೆ ಬೆಳಗಾವಿಯಲ್ಲಿ ಜಾಗ ಇಲ್ಲ ಎಂದು ನಿರೂಪಿಸಿದ್ದು,  ಹೃದಯ ಶ್ರೀಮಂತಿಕೆ ಇರುವವರು. ಮಹಾನಗರ ಪಾಲಿಕೆಯ ನೂತನ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜಾತ್ಯಾತೀತವಾಗಿ, ಭಾಷಾತೀತವಾಗಿ  ಜನರು ಆಶೀರ್ವಾದ ಮಾಡಿದ್ದಾರೆ. ಆ ವಿಶ್ವಾಸವನ್ನು ಉಳಿಸಬೇಕು. ಮಹಾನಗರ ಪಾಲಿಕೆ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ ಎಂದ ಮುಖ್ಯಮಂತ್ರಿಗಳು,  ನಮ್ಮ ಸರ್ಕಾರ ಗಡಿ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬೆಳಗಾವಿ ಕರ್ನಾಟಕದ ಕಿರೀಟಪ್ರಾಯವಾಗಿರುವ ಜಿಲ್ಲೆ.  ಹಾಗಾಗಿ ಅದರ ಗೌರವ, ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ನಮ್ಮ  ಸರ್ಕಾರದ ಗಮನದಲ್ಲಿರುತ್ತದೆ. ಪಾಲಿಕೆಯ ಎಲ್ಲ ಕೆಲಸ  ನಿಗದಿತ ಅವಧಿಯಲ್ಲಿ ಮುಗಿಯಲಿ ಹಾಗೂ ಗುಣಮಟ್ಟದಿಂದ ಕೂಡಿರಲಿ ಎಂದರು.

ಸಮಾರಂಭದಲ್ಲಿ ಸಚಿವ ಬಿ.ಎ.ಬಸವರಾಜ, ಗೋವಿಂದ ಕಾರಜೋಳ, ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News