ಮೈಸೂರು: ಬಡತನ, ನಿರುದ್ಯೋಗದಿಂದ ಬೇಸತ್ತು ಇಬ್ಬರು ಸಹೋದರರು ಆತ್ಮಹತ್ಯೆ

Update: 2021-09-26 07:26 GMT

ಮೈಸೂರು: ಬಡತನ, ಉದ್ಯೋಗವಿಲ್ಲ ಬೇಸತ್ತ ದಲಿತ ಕುಟುಂಬಕ್ಕೆ ಸೇರಿದ ಸಹೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಕಟ್ಟೆಮನಗನಹಳ್ಳಿ ಗ್ರಾಮದ ಸಿದ್ದರಾಜು ಮತ್ತು ರತ್ನಮ್ಮ ದಂಪತಿಯ ಪುತ್ರರಾದ ಕೂಲಿ ಕಾರ್ಮಿಕ ಸಿದ್ದರಾಜು (22), ಪದವಿ ಮಾಡಿರುವ ನಾಗರಾಜು (20) ಆತ್ಮಹತ್ಯೆ ಮಾಡಿಕೊಂಡಿರುವ ಸಹೋದರರು.

ತೀರ ಬಡತನದ ಈ ಕುಟುಂಬಕ್ಕೆ ಯಾವುದೇ ಜಮೀನು ಇರಲಿಲ್ಲ, ವಾಸಕ್ಕೆ ಸೂಕ್ತ ಮನೆಯೂ ಇರಲಿಲ್ಲ, ಕೆಲಸ ಸಿಕ್ಕಿದ ಕಡೆಗಳಲ್ಲಿ ಇವರ ಬದುಕು ನಡೆಯುತ್ತಿತ್ತು. ಇಷ್ಟಾದರೂ ಬಡತನದಿಂದ ಹೊರಬರಲು ಸಾಧ್ಯವಾಗಿರಲಿಲ್ಲ, ನಾಗರಾಜು ಪದವಿ ವ್ಯಾಸಾಂಗ ಮಾಡಿದ್ದರೂ ಉದ್ಯೋಗವಿಲ್ಲದೆ ನೊಂದಿದ್ದರು.

ತಮ್ಮ ತಂದೆ ತಾಯಿ ಕಷ್ಟಪಡುತ್ತಿರುವುದನ್ನು ಕಂಡು ನೊಂದಿದ್ದ ಸಹೋದರರಾದ ಸಿದ್ದರಾಜು ಮತ್ತು ನಾಗರಾಜು, ಶುಕ್ರವಾರ ಕುಟುಂಬದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ನಂತರ ನಾವು ಬದುಕಿದ್ದರೆ ಇದೇ ರೀತಿ ಇರಬೇಕು ಅದರ ಬದಲು ಸಾಯುವುದು ಒಳ್ಳೆಯದು ಎಂದು ತೀರ್ಮಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿದ್ದರಾಜು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರೆ, ತಮ್ಮ ನಾಗರಾಜು ಮನೆಯಿಂದ ಸ್ವಲ್ಪ ದೂರ ಹೋಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ನಾಗರಾಜು ವನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಂತರ ಕುಟುಂಬದವರು ಮತ್ತು ಗ್ರಾಮಸ್ಥರು  ಒಂದೇ ಕಡೆ ಸಹೋದರರ ಅಂತ್ಯ ಸಂಸ್ಕಾರ ನೆರವೇರಿಸಿದರು.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News