'ಭಾರತ್ ಬಂದ್' ಗೆ ಕಾಂಗ್ರೆಸ್ ಬೆಂಬಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Update: 2021-09-26 12:07 GMT

ಬೆಂಗಳೂರು, ಸೆ. 26: ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೇಶದ ಅನ್ನದಾತರು ನಾಳೆ (ಸೆ.27) ನಡೆಯುತ್ತಿರುವ `ಭಾರತ್ ಬಂದ್' ಕರೆಗೆ ರಾಜ್ಯ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

`ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ರೈತ ವಿರೋಧಿ ಧೋರಣೆಯಿಂದಾಗಿ ದೇಶದ ಬಹುಸಂಖ್ಯಾತ ಅನ್ನದಾತ ಸಮುದಾಯ ತೀವ್ರ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೆಲವೇ ಮಂದಿ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಬಿಜೆಪಿ ಇಡೀ ಶ್ರಮಿಕ ಜನಮುದಾಯವನ್ನು ವಂಚಿಸುತ್ತಿದೆ ಎಂದು ಶಿವಕುಮಾರ್ ದೂರಿದ್ದಾರೆ.

`ಪ್ರಧಾನಿ ಮೋದಿ ಸರಕಾರದ ಕರಾಳ ಶಾಸನ, ನೀತಿ ಹಾಗೂ ಧೋರಣೆ ವಿರುದ್ಧ ರೈತರು ದಿಲ್ಲಿಯ ರಸ್ತೆಗಳಲ್ಲಿ ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ನಿರಂತರ ಪ್ರಯತ್ನ ನಡೆಸಿದ ಬಿಜೆಪಿ ಸರ್ಕಾರಕ್ಕೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕೇಳುವ ಕನಿಷ್ಟ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಃಸ್ಥಿತಿಗೆ ನಿದರ್ಶನ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ರೈತರ ಹಿತರಕ್ಷಣೆಗಾಗಿ ದಶಕದ ಹಿಂದೆಯೇ ಭೂಸ್ವಾಧೀನ ಕಾಯ್ದೆಯನ್ನು ಕಾಂಗ್ರೆಸ್ ನೇತ್ರತ್ವದ ಯುಪಿಎ ಸರಕಾರ ಜಾರಿ ಮಾಡಿತ್ತು. ಆದರೆ, ಅದಕ್ಕೆ ವಿರುದ್ದವಾದ ದಿಕ್ಕಿನಲ್ಲಿ ಸಾಗಿದ ಮೋದಿ ಸರಕಾರವು, 7 ವರ್ಷಗಳಲ್ಲಿ ದೇಶದ ರೈತರ ಬದುಕನ್ನು ಅಸಹನೀಯಗೊಳಿಸಿದೆ. ಇದರ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಒಬ್ಬ ರೈತನ ಮಗನಾಗಿ ಬೆಂಬಲಿಸುತ್ತೇನೆ. ಕಾಂಗ್ರೆಸ್ ಪಕ್ಷದ ನೈತಿಕ ಬೆಂಬಲವೂ ಇದೆ. ಹೋರಾಟ ಶಾಂತಿಯುತವಾಗಿರಲಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News