ಡಿಕೆಶಿ, ಸಿದ್ದರಾಮಯ್ಯ ಇನ್ನು ಎರಡು ದಶಕಗಳ ಕಾಲ ನಿರುದ್ಯೋಗಿಗಳು: ನಳಿನ್ ಕುಮಾರ್ ಕಟೀಲ್

Update: 2021-09-26 12:11 GMT

ಬೆಳಗಾವಿ, ಸೆ. 26: ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯುತ್ತಿದೆ. ಆದರೆ ಈ ಇಬ್ಬರು ಇನ್ನೂ ಮುಂದಿನ ಎರಡು ದಶಕಗಳ ಕಾಲ ನಿರುದ್ಯೋಗಿಗಳಾಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ. 

ರವಿವಾರ ಬೆಳಗಾವಿಯಲ್ಲಿ ಪಾಲಿಕೆ ನೂತನ ಬಿಜೆಪಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂರು ಮಹಾಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಡಿಕೆಶಿ, ಸಿದ್ದರಾಮಯ್ಯ ಇನ್ನೂ ಎರಡು ದಶಕಗಳ ಕಾಲ ನಿರುದ್ಯೋಗಿಗಳಾಗಿರಬೇಕು. ಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದರು.

ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ 150 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಬಗ್ಗೆ ರಾಜ್ಯದ ಜನರಲ್ಲಿ ದಿನೇ ದಿನೇ ಅಭಿಮಾನ, ನಂಬಿಕೆ ಹೆಚ್ಚುತ್ತಿದೆ. ಬಿಜೆಪಿಯಿಂದಲೇ ಕರ್ನಾಟಕ ಕಲ್ಯಾಣ ರಾಜ್ಯವಾಗಿ ಮಾರ್ಪಡುತ್ತಿದೆ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. 

ಬಿಜೆಪಿ ಗೆಲ್ಲಿಸಿದ ಮತದಾರರಿಗೆ ಪಕ್ಷದಿಂದ ಅಭಿನಂದಿಸುತ್ತೇನೆ. ರಾಷ್ಟ್ರದ ಅಭಿವೃದ್ಧಿ ಚಿಂತನೆಯ ಆಡಳಿತವನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅದೇ ರೀತಿ ಬಿಜೆಪಿ ನಗರಸೇವಕರು ಕಾರ್ಯನಿರ್ವಹಿಸಬೇಕು. ಬೆಳಗಾವಿ ರಾಜ್ಯದ ಮಾದರಿ ನಗರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

ರೈತರ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ: ಸೆ.27ರ ಭಾರತ್ ಬಂದ್‍ಗೆ ಕರೆ ವಿಚಾರವಾಗಿ ಮಾತನಾಡುತ್ತಾ, ಇವತ್ತು ರೈತರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಕಳೆದೆರಡು ವರ್ಷದಿಂದ ಇಂತಹ ಹತ್ತಾರು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಇಂದು ರೈತರು, ಜನರು ಸರಕಾರದ ಪರವಾಗಿದ್ದಾರೆ. ನಮ್ಮ ಸರಕಾರ ರೈತರ ಪರವಾಗಿದೆ, ಹತ್ತಾರು ಬಾರಿ ಕೇಂದ್ರ ಸರಕಾರ ಚರ್ಚೆಗೆ ಕರೆದಿದೆ. ರೈತರೊಂದಿಗೆ ಚರ್ಚಿಸಲು ಕೇಂದ್ರ ಸರಕಾರ ಸಿದ್ಧವಿದೆ. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News