×
Ad

ಪಂಚಮಸಾಲಿ ಮೀಸಲಾತಿ; ಸರಕಾರ ಸ್ಪಷ್ಟ ಭರವಸೆ ನೀಡಿದರೆ ಹೋರಾಟ ಮುಂದೂಡಿಕೆ: ಶಾಸಕ ಯತ್ನಾಳ್

Update: 2021-09-26 18:01 IST
ಬಸನಗೌಡ ಪಾಟೀಲ್ ಯತ್ನಾಳ್ 

ಗದಗ, ಸೆ. 26: `ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ `2-ಎ' ಮೀಸಲಾತಿ ಕಲ್ಪಿಸುವ ಸಂಬಂಧ ಸರಕಾರದ ಸ್ಪಷ್ಟ ಭರವಸೆ ನೀಡಿದರೆ ಹೋರಾಟವನ್ನು ಮುಂದೂಡಲಾಗುವುದು' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಮೀಸಲಾತಿ ಹೋರಾಟ ನಡೆಯಲಿದ್ದು, ಅದಕ್ಕೂ ಮೊದಲು ಸರಕಾರ ಮೀಸಲಾತಿ ಕಲ್ಪಿಸುವ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಕೇವಲ ಪಂಚಮಸಾಲಿ ಸಮುದಾಯ ಮಾತ್ರವಲ್ಲ, ಹಿಂದುಳಿದ ಅನೇಕ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದೇವೆ. ಸಿಎಂ ಬೊಮ್ಮಾಯಿ ಅವರು ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಹಿಂದುಳಿದ ಎಲ್ಲ ಸಮಾಜಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯ ಒದಗಿಸಬೇಕು ಎಂದರು.

ನಾವು ಹೋರಾಟ ಮಾಡಲೇಬೇಕೆಂಬ ಹಠಕ್ಕೆ ಬಿದ್ದಿಲ್ಲ. ಆದರೆ, ಸರಕಾರ ಅನಗತ್ಯ ವಿಳಂಬ ಮಾಡುವುದು ಸರಿಯಲ್ಲ. ಸಚಿವ ಸಿ.ಸಿ.ಪಾಟೀಲ್ ಹಾಗೂ ಮುಖ್ಯಮಂತ್ರಿ ಮೇಲೆ ನಮಗೆ ವಿಶ್ವಾಸವಿದೆ. ಅ.1ರಂದು ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸಿಎಂ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಿದರು.

ಈಗಾಗಲೇ ಪಂಚಮಸಾಲಿ ಶ್ರೀಗಳು ಹಾಗೂ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ನಾವೆಲ್ಲರೂ ಸ್ಪಷ್ಟಪಡಿಸಿದ್ದೇವೆ. ನಮ್ಮದೊಂದೆ ಬೇಡಿಕೆಯಲ್ಲ. ಪರಿಶಿಷ್ಟ ಪಂಗಡ(ಎಸ್ಟಿ), ಮಡಿವಾಳ ಸೇರಿದಂತೆ ಇತರ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News