6ನೇ ತರಗತಿವರೆಗಿನ ಶಾಲೆ ಸದ್ಯಕ್ಕೆ ತೆರೆಯಲ್ಲ: ಸಚಿವ ಆರ್ ಅಶೋಕ್

Update: 2021-09-26 13:36 GMT

ಹಾಸನ : 6ನೇ ತರಗತಿ ಒಳಗಿನ ಶಾಲೆ ಸದ್ಯಕ್ಕೆ ತೆರೆಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ನಗರದ ಸಮೀಪ ಎಂ. ಕೃಷ್ಣಾ ನಗರದಲ್ಲಿ ಹಾಸನ ಜಿಲ್ಲಾ ಒಕ್ಕಲಿಗರ ಸಂಗದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೋವಿಡ್ 3ನೇ ಅಲೆ ಸಂಬಂಧವಾಗಿ ಪ್ರತಿ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಯಲ್ಲೂ ಸಿದ್ಧತೆಯನ್ನು ಸರ್ಕಾರವು ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಹಂತ ಹಂತವಾಗಿ ಎಲ್ಲಾ ವಹಿವಾಟಿಗೂ ಅವಕಾಶ ಕೊಡಲಾಗುವುದು.

ಕೋವಿಡ್ ನಿಂದ ಸಾವಿಗೀಡಾದವರಿಗೆ ಶೀಘ್ರ ಪರಿಹಾರ ನೀಡುತ್ತೇವೆ ಎಂದ ಅವರು, ಅರ್ಹರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಮಾಧ್ಯಮದವರು ಕೇಳಿದ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆಗೆ ಉತ್ತರಿಸಿದ ಅವರು, ನಾನೂ ಕೂಡ ಆರ್.ಎಸ್.ಎಸ್. ನಿಂದ ಬಂದವನೇ ಆಗಿರುವುದರಿಂದ ಆರ್.ಎಸ್.ಎಸ್. ಎಂದರೆ ರಾಜಕೀಯ ಪಕ್ಷವಲ್ಲ ಅದೊಂದು ಸಾಮಾಜಿಕ ಸಂಸ್ಥೆಯಾಗಿದೆ ಎಂದು ಕುಟುಕಿದರು. ಕಾಂಗ್ರೆಸ್ ಪಕ್ಷದವರಾಗೆ ನಾವು ಕುಟುಂಬ ರಾಜಕೀಯದಿಂದ ಬಂದಿರುವುದಿಲ್ಲ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ಬ್ಯಾಟರಿ ಹಾಕಿದರೂ ಕಾಂಗ್ರೆಸ್ ಕಾಣುವುದಿಲ್ಲ ಎಂದು ಟಾಂಗ್ ನೀಡಿದರು. ನಾವು ಕಾಂಗ್ರಸ್ ನವರಿಂದ ಏನು ಕಲಿಯಬೇಕಿಲ್ಲ ಹಾಗೂ ಅವಶ್ಯಕತೆ ಇರುವುದಿಲ್ಲ.

ಜಾತಿಗಣತಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್ ಅವರು, ಸಿದ್ದರಾಮಯ್ಯ ಹೇಳುತ್ತಿರುವುದೆಲ್ಲಾ ಅಪ್ಪಟ ಸುಳ್ಳು. ಜಾತಿ ಗಣತಿಗೆ ಸರ್ಕಾರದ ಕಾರ್ಯದರ್ಶಿ ಸಹಿಯನ್ನೇ ಹಾಕಿರುವುದಿಲ್ಲ. ಕಾಂಗ್ರೆಸ್ ಪಕ್ಷದ ಐದು ವರ್ಷ ಅವದಿಯಲ್ಲಿ ಬಿಡುಗಡೆಗೊಳಿಸದೆ ನಾಟಕ ವಾಡುತ್ತಿದ್ದಾರೆ ಎಂದ ಅವರು, ಇದು ರಾಜಕೀಯದ ಕಪಟ ನಾಟಕ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. 

''ತಾಲೂಕಿನ ಗೊರೂರು ಹೇಮಾವತಿ ಜಲಾಶಯದ ಅಕ್ರಮ ವಿಚಾರದಲ್ಲಿ ಯಾರೊಬ್ಬರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ನಾನು ಕಂದಾಯ ಮಂತ್ರಿ ಆದ ನಂತರವೇ ತನಿಖೆ ಶುರು ಮಾಡಲಾಗಿದ್ದು, ಸರ್ಕಾರಿ ಆಸ್ತಿಯನ್ನು ಯಾರಿಗೂ ಅಕ್ರಮವಾಗಲು ಬಿಡುವುದಿಲ್ಲ. ರಕ್ಷಿಸುತ್ತೇವೆ ಎಂದು ಎಚ್ಚರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮಾತನಾಡುತ್ತಾ, ನಾವು ಇಂದು ಭಾರತೀಯ ಸಂಸ್ಕೃತಿ ಶಿಕ್ಷಣ ತರುತ್ತಿದ್ದೇವೆ.ಕಾಂಗ್ರೆಸ್ ಪಕ್ಷದವರು ಇಟಲಿ ಶಿಕ್ಷಣ ನೀತಿ ತರಲು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಹಿನ್ನಲೆ ನಮ್ಮ ರಾಜ್ಯದಲ್ಲಿ ಆತುರವಾಗಿಯೇ ಜಾರಿ ಮಾಡುತ್ತಿದ್ದೇವೆ. ಈ ಬಗ್ಗೆ ತಾಕತ್ತಿದ್ದರೇ ಕಾಂಗ್ರೆಸ್ ಪಕ್ಷದವರು ನಮ್ಮ ಜೊತೆ ಚರ್ಚೆಗೆ ಬರಲಿ ಎಂದು ಬಹಿರಂಗ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News