ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್: ನಾಳೆ ಕರ್ನಾಟಕ ಸ್ತಬ್ಧ ಸಾಧ್ಯತೆ

Update: 2021-09-26 14:08 GMT
ಫೈಲ್ ಚಿತ್ರ

ಬೆಂಗಳೂರು, ಸೆ. 26: ಕೃಷಿ ಕಾಯ್ದೆಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿ ವಿರೋಧಿಸಿ ‘ಸಂಯುಕ್ತ ಕಿಸಾನ್ ಮೋರ್ಚಾ' ನಾಳೆ(ಸೆ.27) ಭಾರತ್ ಬಂದ್‍ಗೆ ಕರೆ ನೀಡಿದ್ದು, ಕರ್ನಾಟಕವೂ ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ವರೆಗೆ ಬಂದ್ ನಡೆಯಲಿದ್ದು, ಬಸ್, ರೈಲು ಸಂಚಾರ ತಡೆಯಲಾಗುವುದು. ಹೆದ್ದಾರಿಗಳನ್ನೂ ಬಂದ್ ಮಾಡಲಾಗುವುದು ಎಂದು ರೈತ, ದಲಿತ ಮತ್ತು ಎಡಪಕ್ಷಗಳ ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಮತ್ತೊಂದೆಡೆ ಅಗತ್ಯ ಸೇವೆಗಳು ಹೊರತುಪಡಿಸಿ, ಉಳಿದಂತೆ ಬಹುತೇಕ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ.

ರೈತ ಸಂಘಟನೆಗಳು ಮಾತ್ರವಲ್ಲದೆ, ದಲಿತ, ಕಾರ್ಮಿಕ, ಕನ್ನಡ ಪರ ಸಂಘಟನೆಗಳು ಬಂದ್ ಯಶಸ್ವಿಗೊಳಿಸಲು ಮನವಿ ಮಾಡಿವೆ. ಬಹುತೇಕ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆಯಾದರೂ ಸಾಕಷ್ಟು ಸಂಘಟನೆಗಳು ನೈತಿಕ ಬೆಂಬಲ ನೀಡುವ ಘೋಷಣೆ ಮಾಡಿವೆ.

ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿಯೂ ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ, ಪ್ರಾಂತ್ಯ ರೈತ ಸಂಘ, ಆಟೋರಿಕ್ಷಾ, ಟ್ಯಾಕ್ಸಿ, ಚಾಲಕರ ಸಂಘ, ಸಿಐಟಿಯು, ಎಸ್‍ಯುಸಿಐ ಸೇರಿದಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ರಸ್ತೆತಡೆ ನಡೆಸಿ, ಪ್ರತಿಭಟನೆ ನಡೆಸಲು ಮುಂದಾಗಿವೆ.

ಮುಖ್ಯವಾಗಿ ಬೆಂಗಳೂರಿನ ಪುರಭವನದ ಮುಂಭಾಗದಿಂದ ಫ್ರೀಡಂ ಪಾರ್ಕ್ ವರೆಗೆ ಬೆಳಗ್ಗೆ 11 ಗಂಟೆಯಿಂದ ಬೃಹತ್ ಮೆರವಣಿಗೆ ನಡೆಯಲಿದ್ದು, ರೈತ ಮುಖಂಡರು, ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಆನಂದ ರಾವ್ ವೃತ್ತದಲ್ಲಿನ ಗಾಂಧಿ ಪುತ್ಥಳಿ ಬಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಮತ್ತೊಂದೆಡೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅತ್ತಿಬೆಲೆ ಗಡಿಬಂದ್ ಮಾಡಿ ಭಾರತ್ ಬಂದ್‍ಗೆ ಬೆಂಬಲ ಘೋಷಿಸಿದ್ದಾರೆ. ಇನ್ನು, ಲಾರಿ, ಮ್ಯಾಕ್ಸಿಕ್ಯಾಬ್ ಸಂಘಟನೆಗಳು ನಾಳಿನ ಪರಿಸ್ಥಿತಿಯನ್ನು ಆಧರಿಸಿ ಲಾರಿಗಳನ್ನು ರಸ್ತೆಗಿಳಿಸಲು ನಿರ್ಧರಿಸಿವೆ. 

ರಾಜಧಾನಿ ಬೆಂಗಳೂರಿನಲ್ಲಿ ಬಳ್ಳಾರಿ ರಸ್ತೆ, ತುಮಕೂರು, ಮೈಸೂರು ರಸ್ತೆ, ಸುಮನಹಳ್ಳಿ ಜಂಕ್ಷನ್, ಹೊಸೂರು ರಸ್ತೆ ಸೇರಿದಂತೆ ಒಂಭತ್ತು ಕಡೆ ರಸ್ತೆ ತಡೆ ನಡೆಸಲು ರೈತ ಸಂಘಟನೆಯವರು ನಿರ್ಧರಿಸಿದ್ದಾರೆ. ಕೆಪಿಸಿಸಿ ಕಿಸಾನ್ ಘಟಕ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಕೆ.ಆರ್.ಪುರ, ಹೊಸೂರು, ಹೆಬ್ಬಾಳ ಹಲವೆಡೆ ರಸ್ತೆ ತಡೆ ನಡೆಸಲು ನಿರ್ಧರಿಸಿದೆ.

ಏನು ಇರುತ್ತೇ?

►ಸರಕಾರಿ ಕಚೇರಿ
► ಬಸ್‍ಗಳು, ಆಟೊ, ಟ್ಯಾಕ್ಸಿ
► ಚಿತ್ರಮಂದಿರ
► ಹೋಟೆಲ್‍ಗಳು,
► ಆರೋಗ್ಯ ಸೇವೆಗಳು
► ಪತ್ರಿಕೆ, ಹಾಲು

ಸಂಚಾರ ಸಾಧ್ಯತೆ: ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ.ಕೆಎಸ್ಸಾರ್ಟಿಸಿ, ಬಿಎಂಟಿಸಿ, ಬಸ್‍ಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಯಾವುದೇ ಸರ್ಕಾರಿ ವಾಹನಗಳಿಗಾಗಲಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದರೆ ಪ್ರತಿಭಟನಾ ಆಯೋಜಕರನ್ನೇ ಹೊಣೆ ಮಾಡುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಹೆದ್ದಾರಿ, ಪ್ರತಿಭಟನೆ ನಡೆಯುವ ಸ್ಥಳ ಸೇರಿದಂತೆ ವಿವಿಧೆಡೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪರೀಕ್ಷೆ ಮುಂದೂಡಿಕೆ: ಭಾರತ್ ಬಂದ್ ಕಾರಣ ಸೋಮವಾರ ನಡೆಯಬೇಕಿದ್ದ ತೃತೀಯ ಬಿಎಸ್ಸಿ, ಬಿಸಿಎ 6ನೆ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಸೆ.30ರಂದು ನಡೆಯಲಿವೆ. 

ಸಂಚಾರ ಮಾರ್ಗ ಬದಲಾವಣೆ: ಕೃಷಿ ಕಾಯ್ದೆಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ರೈತ ಸಂಘಟನೆಗಳ ನೇತೃತ್ವದಲ್ಲಿ ಎರಡೂವರೆ ಸಾವಿರ ಜನರು ಶೇಷಾದ್ರಿ ರಸ್ತೆಯ ಮೌರ್ಯ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮುಖಾಂತರ ಫ್ರೀಡಂ ಪಾರ್ಕ್ ವರೆಗೆ ಸಾಗಿ, ನಂತರ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದಾರೆ. 

ಹೀಗಾಗಿ, ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿರುವ ಕೆ.ಜಿ.ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೃಪತುಂಗ ರಸ್ತೆಯ ಕೆಆರ್ ವೃತ್ತದಿಂದ ಪೊಲೀಸ್ ಕಾರ್ನರ್‍ವರೆಗೆ ಮತ್ತು ಪೊಲೀಸ್ ಕಾರ್ನರ್ ವೃತ್ತದಿಂದ ಕೆಆರ್‍ವೃತ್ತದವರೆಗೆ ವಾಹನಗಳ ಸಂಚಾರಕ್ಕೆ ಮಾರ್ಪಾಡು ಮಾಡಲಾಗಿದೆ.

ಈ ಸಂಚಾರ ಮಾರ್ಪಾಡುಗಳು ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ. ಅದೇ ರೀತಿ, ಹಲಸೂರು ಗೇಟ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ನೃಪತುಂಗ ರಸ್ತೆ ಮೂಲಕ ಬಂದುಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗದಲ್ಲೂ ಸಂಚಾರ ನಿಷೇಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಬಿಗಿ ಭದ್ರತೆ: ಇಂದು ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಸಂದರ್ಭದಲ್ಲಿ ಯಾರಾದರೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದರೆ, ಬಲವಂತವಾಗಿ ಬಂದ್ ಮಾಡಿಸಲು ಮುಂದಾದರೆ ಅಂಥವರ ವಿರುದ್ಧ ಘಟನೆ ಕ್ರಮ ಕೈಗೊಳ್ಳುವುದಾಗಿ ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕೋವಿಡ್-19 ನಿಯಮ ಜಾರಿಯಲ್ಲಿದೆ. ಅದರನ್ವಯ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯದಂತೆ ಸೋಮವಾರ ಮುಂಜಾನೆಯಿಂದಲೇ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.

11 ಡಿಸಿಪಿ, ಇಬ್ಬರು ಜಂಟಿ ಆಯುಕ್ತರು, ಇಬ್ಬರು ಹೆಚ್ಚುವರಿ ಆಯುಕ್ತರು ಗಸ್ತಿನಲ್ಲಿರುತ್ತಾರೆ. ಸ್ಥಳೀಯ ಪೆÇಲೀಸರ ಜೊತೆಗೆ 45 ಕೆಎಸ್ಸಾಆರ್ಪಿ 21 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News