ಜೆಡಿಎಸ್ ಅವಕಾಶವಾದಿ ಪಕ್ಷ: ಸಿದ್ದರಾಮಯ್ಯ ಟೀಕೆ

Update: 2021-09-26 14:06 GMT

ಬೆಂಗಳೂರು, ಸೆ. 26: ‘ಜೆಡಿಎಸ್ ಮಾತೆತ್ತಿದ್ದರೆ ನಮ್ಮದು ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಜಾತ್ಯತೀತ ಬರೀ ಹೆಸರಿನಲ್ಲಷ್ಟೇ ಉಳಿದಿದೆ, ಸಿದ್ಧಾಂತವಾಗಿ ಅಲ್ಲ. ಇದೇ ಕಾರಣಕ್ಕೆ ಆ ಪಕ್ಷದಲ್ಲಿ ಹನುಮಂತೇಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‍ನದು ಅವಕಾಶವಾದಿ ರಾಜಕಾರಣ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಇಲ್ಲಿನ ಹೆಬ್ಬಾಳ ಕ್ಷೇತ್ರದಲ್ಲಿ ದಿನಸಿ ಕಿಟ್ ವಿತರಣೆ ಹಾಗೂ ಜೆಡಿಎಸ್ ಮುಖಂಡ ಹನುಮಂತೇಗೌಡ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು 80 ಶಾಸಕರಿದ್ದರೂ ಅವರಿಗೆ ಜೆಡಿಎಸ್‍ಗೆ ಬೆಂಬಲ ಕೊಟ್ಟು, ಅವರನ್ನೇ ಸಿಎಂ ಮಾಡಲು ಒಪ್ಪಿದ್ದೆವು' ಎಂದರು.

‘ಬೆಂಗಳೂರಿನಲ್ಲಿಂದು ಏನಾದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೆ ಅದು ನಮ್ಮ ಸರಕಾರ ನೀಡಿದ್ದ ಅನುದಾನದಲ್ಲಿ, ಏಕೆಂದರೆ ಈಗಿನ ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ದೂರಿದ ಅವರು, ನಾನು ಸಿಎಂ ಆಗಿದ್ದಾಗ ವಾರ್ಷಿಕ 3 ಲಕ್ಷ ಮನೆಗಳಂತೆ 5 ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇವು ಎಂದರು.

‘ಮೋದಿ ಹೇಳಿದ್ದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿ. ಸ್ವಾತಂತ್ರ್ಯ ಭಾರತ ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನೇ ಕಂಡಿಲ್ಲ. ಅಚ್ಚೇದಿನ ಬರುತ್ತೆ ಎಂದು ಹೇಳಿ ಜನರ ಸುಲಿಗೆ ಮಾಡುತ್ತಿದ್ದಾರೆ. ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂ.ಇತ್ತು, ಇವತ್ತು 96 ರೂ.ಆಗಿದೆ, ಡೀಸೆಲ್ ಮೇಲೆ ಯುಪಿಎ ಸರಕಾರ ವಿಧಿಸುತ್ತಿದ್ದ ಅಬಕಾರಿ ಸುಂಕ 3.45ರೂ.ಇವತ್ತು 31.84 ರೂ.ಆಗಿದೆ. ಯಾರಿಗೆ ಬರೆ ಹಾಕ್ತಿದ್ದೀರ ಮೋದಿ ಅವರೇ? ಟ್ರಾಕ್ಟರ್, ಬೈಕ್, ಆಟೋ, ಕ್ಯಾಬ್ ಓಡಿಸುವವರು ಶ್ರೀಮಂತರಾ?' ಎಂದು ಪ್ರಶ್ನಿಸಿದರು.

‘ನಂಜನಗೂಡಿನಲ್ಲಿ ದೇವಸ್ಥಾನ ಒಡೆದವರು ಬಿಜೆಪಿಯವರೇ, ಅದರ ವಿರುದ್ಧ ಪ್ರತಿಭಟನೆ ಮಾಡುವವರು ಬಿಜೆಪಿಯವರೇ. ತಮ್ಮೆಲ್ಲರಲ್ಲಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತು ಹಾಕಿ. ಜೆಡಿಎಸ್ ಬಹುಮತ ಪಡೆದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ, ಅವರಿಗೆ ಯಾರಾದರೂ ನಡೆಯುತ್ತೆ. ನಮ್ಮ ಸರಕಾರದ ಶೂಭಾಗ್ಯ, ಪಶುಭಾಗ್ಯ, ಅನ್ನಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ ಯೊಇಜನೆಗಳ ಫಲ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನರಿಗೂ ತಲುಪಿತ್ತು. ಇದರಲ್ಲಿ ಜಾತಿಬೇಧ ಇದೆಯಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

‘ದೇಶ ಒಡೆಯುವ ಬಿಜೆಪಿ ಸರಕಾರ ತೊಲಗದೇ ಹೋದರೆ ದೇಶ ಉದ್ಧಾರವಾಗಲ್ಲ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದೆ ಇದ್ದ ಆರೆಸೆಸ್ಸ್ ಮತ್ತು ಸಂಘ ಪರಿವಾರ ಮಾತೆತ್ತಿದ್ದರೆ ತಮ್ಮನ್ನು ತಾವು ದೇಶಪ್ರೇಮಿಗಳೆಂದು ಕರೆದುಕೊಳ್ಳುತ್ತಾರೆ. ಕಾಂಗ್ರೆಸ್‍ಗೆ ದೇಶಭಕ್ತಿ ಪಾಠ ಮಾಡಲು ಇವರು ಯಾರು? ದೇಶಭಕ್ತಿ ಹುಟ್ಟಿದ್ದೇ ಕಾಂಗ್ರೆಸ್‍ನಿಂದ, ವಂದೇ ಮಾತರಂ ಹುಟ್ಟಿದ್ದು ಕಾಂಗ್ರೆಸ್‍ನಿಂದ. ಗಾಂಧಿ, ಅಂಬೇಡ್ಕರ್, ಪಟೇಲರ ಪ್ರತಿಮೆ ಮಾಡಿ ನಾವು ಅವರ ಪರವಾಗಿದ್ದೇವೆ ಎಂದು ನಾಟಕವಾಡಿದರೆ ಜನರಿಗೆ ಮೋಸ ಮಾಡಬಹುದು ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಬ್ಯಾಂಕ್‍ಗಳ ರಾಷ್ಟ್ರೀಕರಣ, ಬಡವರಿಗಾಗಿ 20 ಅಂಶಗಳ ಕಾರ್ಯಕ್ರಮ, ದೇಶವನ್ನು ಒಗ್ಗೂಡಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗದೆ ಅವರನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News