ಶಿವಮೊಗ್ಗ; ನಿವೃತ್ತ ಸೈನಿಕರು ಸಂಘಟಿತರಾಗಲು ಸಲಹೆ

Update: 2021-09-26 14:18 GMT

ಶಿವಮೊಗ್ಗ,ಸೆ.26: ಸೇನೆಯಿಂದ ನಿವೃತ್ತರಾದ ಬಳಿಕ ಸರಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಹರಸಾಹಸ ಪಡುವ ಸ್ಥಿತಿ ಇದೆ. ಅದಕ್ಕಾಗಿ ಮಾಜಿ ಸೈನಿಕರು ಸಂಘಟಿತರಾಗಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ.ಹಿರೇಮಠ ಸಲಹೆ ನೀಡಿದರು.

ನಗರದ ಸರಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ 21 ನೇ ವಾರ್ಷಿಕೋತ್ಸವ ಮತ್ತು ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.

ಸೇನೆಯಿಂದ ನಿವೃತ್ತರಾಗಿ ಬಂದ ನಂತರ ಪುನರ್ವಸತಿಗಾಗಿ ಸರಕಾರವು ಹಲವಾರು ಕಾನೂನುಗಳನ್ನು ಮಾಡಿದೆ. ವಿವಿಧ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಈ ಸೌಲಭ್ಯಗಳನ್ನು ಪಡೆಯಲೂ ಸೈನಿಕರು ಹೋರಾಟ ನಡೆಸುವಂತಾಗಿದೆ ಎಂದು ಹೇಳಿದರು.

ನಿವೃತ್ತಿಗೆ ಮುಂಚೆಯೇ ತಮ್ಮ ಹಾಗೂ ತಮ್ಮ ಕುಟುಂಬದ ದಾಖಲಾತಿಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳದಿದ್ದರೆ ತಮ್ಮ ಮಕ್ಕಳ ವಿದ್ಯಾಭ್ಯಾಸ, ವಿವಿಧ ಮೀಸಲಾತಿಗಳನ್ನು ಪಡೆಯಲು ತೊಂದರೆ ಉಂಟಾಗುತ್ತದೆ. ಆದ್ದರಿಂದ ನಿವೃತ್ತಿ ಅಂಚಿಗೆ ಬರುತ್ತಿದ್ದಂತೆಯೇ ಎಲ್ಲ ದಾಖಲೆಗಳನ್ನು ಸಮರ್ಪಕ ರೀತಿಯಲ್ಲಿ ಸಿದ್ಧವಾಗಿಟ್ಟರೆ ಮುಂದಿನ ದಿನಗಳಲ್ಲಿ ಪರದಾಡುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು.

ನಗರಕ್ಕೆ ಒಂದು ನಿಷ್ಕಿçಯ ಏರ್ ಕ್ರಾಫ್ಟ್ ಹಾಗೂ ಟ್ಯಾಂಕ್ ಮಂಜೂರಾತಿ ಪ್ರಕ್ರಿಯೆ ಕೇಂದ್ರ ಸರಕಾರದ ಮಟ್ಟದಲ್ಲಿ ಜಾರಿಯಲ್ಲಿದ್ದು, ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಶಿವಮೊಗ್ಗ ಉಪವಿಭಾಗಾಧಿಕಾರಿ ಹಾಗೂ ನಿವೃತ್ತ ಸೈನಿಕ ಟಿ.ವಿ.ಪ್ರಕಾಶ್, ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಮಾಜಿ ಸೈನಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

 ಕ್ಯಾಂಟೀನ್‌ನಲ್ಲಿ ಸೌಲಭ್ಯ ಹೆಚ್ಚಳ: ಶಿವಮೊಗ್ಗ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಕಮ್ಯಾಂಡಿಂಗ್ ಅಧಿಕಾರಿ ಕರ್ನಲ್ ಅರುಣ್ ಯಾದವ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರಿಗೆ ನೀಡಲಾಗುತ್ತಿರುವ ಮಿಲಿಟರಿ ಕ್ಯಾಂಟೀನ್‌ನಲ್ಲಿ ವಿವಿಧ ಸೌಲಭ್ಯಗಳನ್ನು ಇನ್ನೂ ಹೆಚ್ಚು ಮಾಡಲಾಗುವುದು. ಮಾಜಿ ಸೈನಿಕರ ಅಗತ್ಯಗಳಿಗೆ ತಕ್ಕಂತೆ ಕ್ಯಾಂಟೀನ್‌ನ ಸಾಮರ್ಥ್ಯವನ್ನು ವೃದ್ಧಿಸಲಾಗುವುದು ಎಂದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಪಿ.ವಿ.ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News