ಡಿಸೆಂಬರ್ ವೇಳೆಗೆ ಬೆಳಗಾವಿಗೆ ಸರಕಾರಿ ಕಚೇರಿಗಳ ಸ್ಥಳಾಂತರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-09-26 14:58 GMT

ಬೆಳಗಾವಿ, ಸೆ. 26: ರಾಜ್ಯದ ಸಕ್ಕರೆ ನಿರ್ದೇಶನಾಲಯ ಅಕ್ಟೋಬರ್ 3ರಿಂದ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಲಿದೆ. ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಆ ವೇಳೆಗೆ ಸಾಧ್ಯವಿರುವಷ್ಟು ಸರಕಾರಿ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20ನೆ  ಸಾಲಿನಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಮನೆಗಳು ಹಾಗೂ ಬೆಳೆಗಳು ಹಾನಿಗೊಳಗಾಗಿವೆ. ಆ ಸಂದರ್ಭದಲ್ಲಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದರು. ಒಟ್ಟು 44,205 ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಾರಂಭವಾಗಿದೆ ಎಂದರು.

ಎ ಮತ್ತು ಬಿ ಕೆಟಗೆರಿ ಮನೆಗಳಿಗೆ 718 ಕೋಟಿ ರೂ., ಬಿ ಕೆಟಗರಿಗೆ 9.64 ಕೋಟಿ ರೂ. ಹಾಗೂ ಸಿ ಕೆಟಗರಿಗೆ 132 ಕೋಟಿ ರೂ.ಗಳು ಸೇರಿದಂತೆ ಒಟ್ಟು 1,864 ಕೋಟಿ ರೂ.ಗಳನ್ನು ನೀಡಲಾಗಿದ್ದು, ಬೆಳೆ ಹಾನಿಗೆ 263 ಕೋಟಿ ರೂ.ಗಳ ಪರಿಹಾರವನ್ನು 1.56 ಲಕ್ಷ ರೈತರಿಗೆ ಈಗಾಗಲೇ ನೀಡಲಾಗಿದೆ ಎಂದು ವಿವರ ನೀಡಿದರು.  

ಪರಿಹಾರ ಪಾವತಿಗೆ ತೊಡಕಿರುವ ಅಂಶಗಳ ಬಗ್ಗೆ ಕಳೆದ ಬಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆ ಕೋರಿರುವ ವಿವರಗಳನ್ನು ಒದಗಿಸಿ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು. 

ಕಬ್ಬು ಬೆಳೆಗಾರರಿಗೆ ಬಾಕಿ ಹಣ: ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ  ಸಂಬಂಧಪಟ್ಟಂತೆ ಈಗಾಗಲೇ ಮಾತುಕತೆ ನಡೆದಿದೆ. ಬಾಕಿ ಹಣವನ್ನು ನೀಡದಿದ್ದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು. ಈ ಮಧ್ಯೆ ಸಕ್ಕರೆ ಕಾರ್ಖಾನೆಗಳು, ಸಕ್ಕರೆ ನಿರ್ದೇಶನಾಲಯ ಹಾಗೂ ಅಪೆಕ್ಸ್ ಬ್ಯಾಂಕ್ ಅವರೊಟ್ಟಿಗೆ ಮಾತುಕತೆ ನಡೆಸಿ  ಹಣ ಪಾವತಿಗೆ ಕ್ರಮವಹಿಸಲಾಗುವದು ಎಂದು ಹೇಳಿದರು.

ವೈರಲ್ ಜ್ವರ: ರಾಜ್ಯದಲ್ಲಿ ವೈರಲ್ ಜ್ವರದ ಬಗ್ಗೆ ಸಂಪೂರ್ಣ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News