ಆರೆಸ್ಸೆಸ್ ಗುಲಾಮಗಿರಿಯಿಂದ ಹೊರ ಬನ್ನಿ: ಮಾಜಿ ಸಚಿವ ಡಾ.ಮಹದೇವಪ್ಪ ಸಲಹೆ

Update: 2021-09-26 17:07 GMT

ಬೆಂಗಳೂರು, ಸೆ. 26: `ನೀವು ಸಿಎಂ ಆಗಿರುವುದು ಸಂವಿಧಾನದ ಬಲದಿಂದ ಎಂಬ ಅಂಶವನ್ನು ನೆನಪಿಟ್ಟುಕೊಂಡು ಆರೆಸ್ಸೆಸ್ ನ ಗುಲಾಮಗಿರಿಯಿಂದ ಆದಷ್ಟು ಬೇಗ ಹೊರಗೆ ಬನ್ನಿ ಮತ್ತು ಇನ್ನೊಬ್ಬರನ್ನು ಗುಲಾಮಗಿರಿಗೆ ಹೋಲಿಸುವ ಮುನ್ನ ನಿಮ್ಮಂತಹ ಕೋಟ್ಯಾಂತರ ಮಂದಿಗೆ ಘನತೆಯ ಮತ್ತು ಸಮಾನತೆಯ ಬದುಕಿನ ವಾತಾವರಣವನ್ನು ನಿರ್ಮಿಸಿದ ಅಂಬೇಡ್ಕರ್ ಅವರನ್ನು ಒಮ್ಮೆ ನೆನೆಯಿರಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮದೇಹವಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ಮಾಡಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕೇಂದ್ರ ಸರಕಾರದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಆರೆಸೆಸ್ಸ್ ಪ್ರೇರಿತ ನೀತಿಯಾಗಿದ್ದು, ಅದು ದೇಶದ ಬಹುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬ ಗಂಭೀರ ಸಂಗತಿಯ ಚರ್ಚೆಯ ನಡುವೆಯೇ ರಾಜ್ಯದ ಸಿಎಂ ಬೊಮ್ಮಾಯಿ ಅವರು ಆರೆಸೆಸ್ಸ್ ಎಂದರೆ ರಾಷ್ಟ್ರೀಯತೆ, ಆರೆಸೆಸ್ಸ್‍ನಿಂದ ದೇಶಕ್ಕೆ ಒಳ್ಳೆಯದು ಆಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಆಗುವುದಿದ್ದರೆ ಆರೆಸೆಸ್ಸ್ ವಿಚಾರವನ್ನು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಿದರೆ ತಪ್ಪೇನು? ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

`ಕಾಂಗ್ರೆಸ್‍ಗೆ ಬೇಕಿರುವುದು ಮೆಕಾಲೆ ಶಿಕ್ಷಣ ಪದ್ಧತಿ. ಅವರಿಗೆ ಬೇಕಿರುವುದು ಗುಲಾಮತನ’ ಎಂದು ಬಾಲಿಶವಾಗಿ ಮಾತನಾಡುವ ಸಿ.ಟಿ.ರವಿಯಂತಹ ವ್ಯಕ್ತಿಯ ಮಟ್ಟಕ್ಕೆ ಸಿಎಂ ಇಳಿದಿದ್ದಾರೆ. ಈ ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲೇ ತಮ್ಮ ಸಂಪೂರ್ಣ ಶಿಕ್ಷಣ ಪಡೆದಂತಹ ಬಸವರಾಜ ಬೊಮ್ಮಾಯಿ ಅವರು ಈ ದಿನ ಅವರೇ ಹೇಳುವಂತೆ ಗುಲಾಮರಾಗಿದ್ದಾರೋ ಇಲ್ಲವೇ ಸಿಎಂ ಆಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಜೊತೆಗೆ ಅವರಿಗೆ ಮೆಕಾಲೆ ಶಿಕ್ಷಣ ಪದ್ದತಿಯಡಿ ಶಿಕ್ಷಣ ನೀಡಲಾಗಿತ್ತೋ ಅಥವಾ ಯಾವ ಶಿಕ್ಷಣದ ನೀತಿಯಡಿ ಶಿಕ್ಷಣ ನೀಡಲಾಗಿತ್ತು ಎಂಬ ಅಂಶವನ್ನು ಒಮ್ಮೆ ನೆನಪಿಸಿಕೊಳ್ಳಲಿ. ಸದನದ ಚರ್ಚೆಯೇ ಇಲ್ಲದೇ, ತಜ್ಞರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಬಹುತ್ವದ ಆಶಯಗಳಿಗೆ ವಿರೋಧಿಯಾದ ಕಾಯ್ದೆಗಳನ್ನು ಏಕಾಏಕಿ ಜಾರಿ ಮಾಡಿದ್ದು ಯಾರ ಗುಲಾಮಗಿರಿಗೆ ಒಳಗಾಗಿ ಎಂಬುದನ್ನು ಬೊಮ್ಮಾಯಿ ಅವರೇ ಹೇಳಬೇಕು ಎಂದು ಮಹದೇವಪ್ಪ ಟೀಕಿಸಿದ್ದಾರೆ.

ಚೆನ್ನಾಗಿಯೇ ಇದ್ದ ಬೊಮ್ಮಾಯಿಯವರ ಈ ಬೌದ್ಧಿಕ ಪತನವನ್ನು ನೋಡುತ್ತಾ ನನಗೆ ಅನ್ನಿಸಿದ್ದೇನೆಂದರೆ, ಬಿಜೆಪಿಯಲ್ಲಿ ಅಸ್ತಿತ್ವ ಪಡೆಯಬೇಕಾದರೆ ಮೊದಲು ನಿಮ್ಮ ಬುದ್ಧಿವಂತಿಕೆ ಮತ್ತು ಹೋರಾಟದ ಮನೋಭಾವವನ್ನು ಪಕ್ಕಕ್ಕೆ ಇಟ್ಟು, ತರ್ಕರಹಿತವಾಗಿ ಮಾತನಾಡಬೇಕು ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಾ, ಜವಾಬ್ದಾರಿ ರಹಿತವಾಗಿ ಮಾತನಾಡಬೇಕು' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

`ಬಹುಶಃ ಬೊಮ್ಮಾಯಿಯವರು ಆರೆಸೆಸ್ಸ್ ಹೇಳಿಕೊಟ್ಟ ಪಾಠವನ್ನು ಜನರೆದುರು ಬಂದು ಒಪ್ಪಿಸುತ್ತಿದ್ದು ಬಸವರಾಜ ಬೊಮ್ಮಾಯಿ ಎಂದರೆ ಹೀಗೆ ಇರುವುದು ಎಂಬ ಸಂದೇಶವನ್ನು ರಾಜ್ಯಕ್ಕೆ ನೀಡುತ್ತಿದ್ದಾರೆ' ಎಂದು ಮಹದೇವಪ್ಪ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News