ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ದಲಿತ ಯುವಕನಿಗೆ 11 ಸಾವಿರ ರೂ. ದಂಡ; 8 ಜನರ ವಿರುದ್ಧ ದೂರು ದಾಖಲು

Update: 2021-09-26 17:26 GMT
ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಗಂಗಾವತಿ: ಮೀಯಾಪುರ ಘಟನೆ ಮಾಸುವ ಮುನ್ನವೇ ಕಾರಟಗಿ ತಾಲೂಕಿನ ನಾಗನ ಕಲ್ ಗ್ರಾಮದಲ್ಲಿ ಸಿಂದೋಳ್ಳಿ ಸಮುದಾಯದ ವ್ಯಕ್ತಿಯೋರ್ವ ಗರ್ಭಗುಡಿ ಪ್ರವೇಶಿಸಿದ್ದಕ್ಕಾಗಿ 11 ಸಾವಿರ ರೂ. ದಂಡ ವಿಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರಟಗಿ ಪಟ್ಟಣದ ಸಿಂದೋಳ್ಳಿ ಸಮುದಾಯದ ಯುವಕ ಯಾರೆಪ್ಪ ಎಂಬಾತ ನಾಗನಕಲ್ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಗರ್ಭಗುಡಿಯ ಸ್ವಚ್ಚತೆ ಮಾಡಿ ದೇವಿಗೆ ಹಾರ ಹಾಕಿ ಹೊರಗೆ ಬಂದಿದ್ದಾನೆ. ಇದನ್ನು ನೋಡಿದ ಗ್ರಾಮಸ್ಥರು 11 ಸಾವಿರ ರೂ. ದಂಡ ಹಾಕಿದ್ದಾರೆ. ಈ ಘಟನೆ ನಡೆದಿದ್ದು 10 ತಿಂಗಳ ಹಿಂದೆ. ಮೀಯಾಪುರ ಪ್ರಕರಣ ಮಾಧ್ಯಮ ದಲ್ಲಿ ವರದಿಯಾಗುತ್ತಿದ್ದಂತೆ ನಾಗನಕಲ್ ಪ್ರಕರಣ ಹೊರಬಿದ್ದಿದೆ.

ಪ್ರಕರಣ ಸುದ್ದಿ ತಿಳಿಯುತ್ತಿದ್ದಂತೆ ಕಾರಟಗಿ ತಹಶೀಲ್ದಾರ  ರವಿ ಅಂಗಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಲೆಪ್ಪ ದೇಸಾಯಿ, ಸಿಪಿಐ ಉದಯರವಿ ಗ್ರಾಮಕ್ಕೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದ 8 ಜನರ ವಿರುದ್ದ ದೂರು ದಾಖಲು ಮಾಡಿಕೊಳ್ಳಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರೋರ್ವರು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಗಳನ್ನು ಪರಿಶೀಲಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು 8 ಜನರ ವಿರುದ್ದ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.

- ತುಗ್ಲೆಪ್ಪ ದೇಸಾಯಿ
ಸಮಾಜ ಕಲ್ಯಾಣ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News