ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ನಿರ್ಣಾಯಕವಾಗಬೇಕು: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

Update: 2021-09-26 17:37 GMT

ಶಿವಮೊಗ್ಗ, ಸೆ.26: ಆರು ದಶಕಗಳಿಂದ ಭೂ ವಂಚಿತರಾಗಿ ಅರಣ್ಯ ಭೂಮಿಯಲ್ಲಿ ಸಾಗುವಳಿ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ  ಶರಾವತಿ, ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ ಹುಕುಂ ಸಾಗುವಳಿದಾರರ  ಹೋರಾಟಕ್ಕೆ ರವಿವಾರ ಚಾಲನೆ ದೊರೆತಿದೆ.

ಅಂತಿಮ ಸುತ್ತಿನಲ್ಲಿ ಭೂ ಒಡೆತನ ಪಡೆದೇ ತೀರಬೇಕು ಎಂದು ನಿರ್ಧರಿಸಿರುವ  ಶರಾವತಿ ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಭಾನುವಾರದಿಂದ ಪಾದಯಾತ್ರೆ ಶುರು ಮಾಡಿದ್ದಾರೆ.

ಆರು ದಶಕಗಳಿಂದ ಮುಳುಗಡೆ ಸಂತ್ರಸ್ಥರ ಗೋಳು ಕಂಡು ಕಾಣದಂತಿರುವ ಸರ್ಕಾರದ ಮೇಲೆ‌ ಒತ್ತಡ ತರುವ ಉದ್ದೇಶದಿಂದ ಹಮ್ಮಿಕೊಂಡಿರುವ ಮೂರು ದಿನಗಳ ಪಾದಯಾತ್ರೆಗೆ ತೀರ್ಥಹಳ್ಳಿ ತಾಲೂಕಿನ ಕುರಕುಚ್ಚಿಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು. 

ನಂತರ  ಮಾತನಾಡಿದ ಅವರು,ನಾವೆಲ್ಲಹೋರಾಟ ಜೈಲು, ಅನ್ಯಾಯ ಬಯಲು ಸಿದ್ಧಾಂತದಡಿ ಬಂದವರು. ಚುನಾವಣೆ ಬರಲಿ, ಹೋಗಲಿ; ಅಧಿಕಾರದಲ್ಲ ಇರಲಿ ಬಿಡಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ನಿಮ್ಮ ಜತೆಗೆ ನಾನಿದ್ದೇನೆ. ಇದು ನಿರ್ಣಾಯಕ ಹೋರಾಟವಾಗಬೇಕು ಎಂದರು.

ಜಿಲ್ಲೆಯಲ್ಲಿಮುಳುಗಡೆ ಸಂತ್ರಸ್ತರ ಬವಣೆ ಮುಗಿಯದ ಅಧ್ಯಾಯ ಎಂದ ಅವರು, ಮುಳುಗಡೆ ಸಂತ್ರಸ್ಥರಾದ ನಾವುಗಳು ಹೋರಾಟದ ಮೂಲಕವೇ ಎಲ್ಲವನ್ನು ಪಡೆದುಕೊಂಡಿದ್ದೇವೆ. ಆದರೆ, ಇದೂವರೆಗೆ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಿಸಲಾಗದಿರುವುದು ಕಣ್ಣಲ್ಲಿನೀರು ತರುತ್ತದೆ. ಜನರಿಗೆ ನ್ಯಾಯ ಕೊಡಿಸದೆ ಹೋದರೆ ನಾವೆಲ್ಲಬದುಕಿದ್ದು ಏನು ಪ್ರಯೋಜನ. ಸಂತ್ರಸ್ತರಿಗೆ ಭೂಮಿ ಒಡೆತನ ಸಿಗಲಿಲ್ಲವೆಂದರೆ ಇರಬೇಕು. ಇಲ್ಲವಾದರೆ ಮುಖ್ಯಕ್ಕೆ ಬಟ್ಟೆ ಸುತ್ತಿಕೊಂಡು ಓಡಾಡಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಕ್ಕುಪತ್ರ ಸಿಗುವವರೆಗೆ ಹೋರಾಟ ನಿಲ್ಲಬಾರದು. ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಭೂಮಿಯ ಪಟ್ಟಿ ಮಾಡಿ ತಾಲೂಕು ಕಚೇರಿಗೆ ಸಲ್ಲಿಸೋಣ. ಮಂಜೂರು ಮಾಡಿಕೊಡುವಂತೆ ತಹಸೀಲ್ದಾರ್‌ ಮತ್ತು ಸರಕಾರದ ಮೇಲೆ ಒತ್ತಡ ಹಾಕೋಣ ಎಂದರು.

ಹೋರಾಟದ ನೇತೃತ್ವ ವಹಿಸಿದ್ದ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಮಾತನಾಡಿ, ಇಲ್ಲಿನ ಜನರು ಹಿರೇಭಸ್ಕರ ಮತ್ತು ಲಿಂಗನಮಕ್ಕಿ ಜಲಾಶಯಗಳಿಗಾಗಿ ಎರಡು ಬಾರಿ ತಮ್ಮ ಭೂಮಿ ಮತ್ತು ಬದುಕು ತ್ಯಾಗ ಮಾಡಿದ್ದಾರೆ. ಹಿಂದಿನ ಮೈಸೂರು ಸರಕಾರ ಸಂತ್ರಸ್ತರನ್ನು ತೆರವುಗೊಳಿಸುವ ಸಮಯದಲ್ಲಿನೀಡಿದ್ದ 19 ಅಂಶಗಳ ಭರವಸೆಯಲ್ಲಿಒಂದೇ ಒಂದು ಅಂಶವನ್ನೂ ಈಡೇರಿಸಿಲ್ಲ. ಸಂತ್ರಸ್ತರಿಗೆ ಭೂಮಿ ಒಡೆತನ ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಬ್ಬರ ಮೇಲೊಬ್ಬರು ಕೈ ತೋರಿಸುತ್ತಿದ್ದಾರೆ. ಈಗ ಒಂದೇ ಪಕ್ಷ ಅಧಿಕಾರದಲ್ಲಿರುವುದರಿಂದ ಸಂತ್ರಸ್ತರಿಗೆ ಭೂಮಿ ಒಡೆತನ ನೀಡಬೇಕು. ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಸ್ಥಳೀಯ ಹಿರಿಯರಾದ ಗೋಪಾಲಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿಯ ಪ್ರಮುಖ ಸುರೇಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಹಣಗೆರೆಕಟ್ಟೆ ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್‌ ಸ್ವಾಗತಿಸಿದರು. ಪಾದಯಾತ್ರೆಯಲ್ಲಿಜಿಲ್ಲಾಕಾಂಗ್ರೆಸ್‌ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್‌, ಪ್ರಮುಖರಾದ ಬಿ.ಆರ್‌.ಜಯಂತ್‌, ಸುಂದರೇಶ್‌, ಬಂಡಿ ರಾಮಚಂದ್ರ, ಬಾಳೆಹಳ್ಳಿ ಪ್ರಭಾಕರ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಪಿ.ಶ್ರೀಪಾಲ್‌, ಕೆ.ಎಲ್‌.ಅಶೋಕ್‌, ಡಿಎಸ್‌ಎಸ್‌ ಸಂಚಾಲಕ ಗುರುಮೂರ್ತಿ, ಹಾರೋಗೊಳಿಗೆ ಪದ್ಮನಾಭ್‌ ಮತ್ತಿತರರು ಭಾಗವಹಿಸಿದ್ದರು.

ಮೊದಲ ದಿನ 14 ಕಿ.ಮೀ ಪಾದಯಾತ್ರೆ:

ಶರಾವತಿ,ಚಕ್ರಾ,ಸಾವೆಹಕ್ಲು ಸಂತ್ರಸ್ಥರು ಮೊದಲ ದಿನ ಕನ್ನಂಗಿವರೆಗೆ 14 ಕಿ.ಮೀ. ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿನೂರಾರು ಜನರು ಪಾಲ್ಗೊಂಡಿದ್ದರು. ಹಾದಿಯುದ್ದಕ್ಕೂ ಸಂತ್ರಸ್ತರು ಪಾದಯಾತ್ರೆಯನ್ನು ಕೂಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News