ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-27 12:30 GMT

ಹುಬ್ಬಳ್ಳಿ, ಸೆ. 28: ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ(ಎಫ್‍ಎಸ್‍ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ನಗರದ ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.

ಪುಣೆಯ ಕಡಕ್‍ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡಮಿ(ಎನ್‍ಡಿಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. 16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್‍ಸ್ಪೆಕ್ಟರುಗಳ ನೇಮಕಾತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು . 

ಡಿವೈಎಸ್‍ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ, ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು ಎಂದು ಸಲಹೆ ಮಾಡಿದ ಅವರು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿನ ಜನ ಶಾಂತಿ ಪ್ರಿಯರು ಕೆಲವು ಕಿಡಿಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News