ವಿದ್ಯಾರ್ಥಿ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡ ಸಿಎಂ ಬೊಮ್ಮಯಿ-ಸಚಿವ ನಿರಾಣಿ

Update: 2021-09-27 12:41 GMT
ಕಾರ್ಯಕ್ರದಲ್ಲಿ ಸಚಿವ ನಿರಾಣಿ  ಹಾಗೂ ಸಿಎಂ ಬೊಮ್ಮಯಿ 

ಹುಬ್ಬಳ್ಳಿ, ಸೆ.27: ಅದೊಂದು ಅಪರೂಪದ ಕ್ಷಣ. ಅಲ್ಲಿ ಅಧಿಕಾರದ ಹಮ್ಮು-ಬಿಮ್ಮು, ದೊಡ್ಡವರು, ಚಿಕ್ಕವರು ಯಾವುದೂ ಇರಲಿಲ್ಲ. ಬದಲಿಗೆ ವಿಧೇಯ ವಿದ್ಯಾರ್ಥಿಗಳಂತೆ ಅವರೆಲ್ಲರೂ ಬೆರೆತರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಎಂಜಿನಿಯರಿಂಗ್ ಕಾಲೇಜು. 

ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75ನೇ ವರ್ಷಾಚರಣೆ ಹಾಗೂ ಕೆಎಲ್‍ಇ ಟೆಕ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ. 

ಇದರಲ್ಲಿ ವಿಶೇಷತೆ ಎಂದರೆ ಈ ಇಬ್ಬರೂ ಇದೇ ಕಾಲೇಜಿನ ಸಹಪಾಠಿಗಳು. ಹಾಗಾಗಿಯೇ ಇಂದು ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ತಾವು ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಸ್ನೇಹದ ಮುಂದೆ ಅಧಿಕಾರ ಗೌಣ ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟರು. ಮೊದಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 

ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದವರು ಸಚಿವ ಮುರುಗೇಶ್ ನಿರಾಣಿ, ಇದೇ ಕಾಲೇಜಿನ ವಿದ್ಯಾರ್ಥಿಯಾಗಿ ಇಂದು ಕೈಗಾರಿಕೋದ್ಯಮಿಯಾಗಿರುವ ಅವರು ತಮ್ಮ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿದರು. 

ನಾನು ಇಂಜಿನಿಯರಿಂಗ್‍ನಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ಪ್ರೊಫೆಸರ್ ಅಥವಾ ಹೆಚ್ಚೆಂದರೆ ಎಇಇ ಆಗುತ್ತಿದ್ದೆ. ಆದರೆ ನಾವು 35 ಮಾಕ್ರ್ಸ್ ಕೆಟಗೆರಿಯವರು. ಅದಕ್ಕೆ ಕೈಗಾರಿಕಾ ಸಚಿವನಾದೆ ಎಂದು ಹೇಳುತ್ತಿದ್ದಂತೆ ಸಭಿಕರಿಂದ ಜೋರಾದ ಚಪ್ಪಾಳೆಯ ಸುರಿಮಳೆಯೇ ಸುರಿಯಿತು. ಇದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ನಿರಾಣಿ, ನಿಮ್ಮ ಚಪ್ಪಾಳೆ ನೋಡಿದರೆ ಇಲ್ಲಿ ನನ್ನ ಕೆಟಗರಿಯವರೇ ಬಹಳ ಜನ ಇದ್ದಾರೆಂದು ತಿಳಿಯುತ್ತದೆ ಎಂದು ತಮಾಷೆ ಮಾಡಿದರು.

ನಾನು ಈ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ಅದಕ್ಕಿಂತ ಖುಷಿ ಈ ಕಾರ್ಯಕ್ರಮ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಬಿವಿಬಿ ಕಾಲೇಜು ಸಾಕಷ್ಟು ಜನ ಮೇಧಾವಿಗಳನ್ನು ನೀಡಿದೆ. ವಿಶ್ವದಲ್ಲೇ ಶ್ರೇಷ್ಠ ಐಟಿ ಕಂಪನಿಯಾದ ಇನ್ಫೋಸಿಸ್‍ನ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ, ಕೇಂದ್ರದ ಮಾಜಿ ಸಚಿವ ಅನಂತ್‍ಕುಮಾರ್ ಈ ಕಾಲೇಜಿನ ವಿದ್ಯಾರ್ಥಿಗಳು ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News