ರೈತರಿಂದ ಭಾರತ್ ಬಂದ್: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ, ರೈತರ ಬಂಧನ

Update: 2021-09-27 13:53 GMT

ಬೆಂಗಳೂರು, ಸೆ.27: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‍ಗೆ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಕಡೆಗಳಲ್ಲಿ ರೈತ ನಾಯಕರನ್ನು ಪೊಲೀಸರು ಬಂಧಿಸಿದರು.

ಸೋಮವಾರ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ಅಂಗಡಿಗಳು ತೆರೆದಿದ್ದವು. ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಇದರಿಂದ ಜನ ಸಂಚಾರ ತೀವ್ರವಾಗಿ ತಗ್ಗಿತ್ತು. ರೈತರ ಪ್ರತಿಭಟನೆ ಮೆರವಣಿಗೆ ಹಿನ್ನೆಲೆ ಬಸ್ ಸಂಚಾರವೂ ಕೊಂಚ ಮಟ್ಟಿಗೆ ಇಳಿಕೆಯಾಗಿತ್ತು.

ವಾಗ್ವಾದ: ಮತ್ತೊಂದೆಡೆ ಕೆಲ ಜಿಲ್ಲೆಗಳ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಬಲವಂತದಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿಸಲು ಮುಂದಾಗಿದ್ದು, ಪ್ರತಿಭಟನಕಾರರು ಹಾಗೂ ಅಂಗಡಿ ಮಾಲಕರ ನಡುವೆ ವಾಗ್ವಾದ ನಡೆಯಿತು. ಬಳಿಕ ಪ್ರತಿಭಟನಕಾರರ ಒತ್ತಾಯಕ್ಕೆ ಮಣಿದು ಕೆಲವು ಅಂಗಡಿ ಮಾಲಕರು ಬಂದ್ ಮಾಡಿದ ದೃಶ್ಯ ಕಂಡುಬಂದಿತು.

ಬೆಂಗಳೂರಿನಲ್ಲಿ ರೈತ ಸಂಘಟನೆಯವರು ತರಕಾರಿ ಮಾರುವ ಮೂಲಕ ಪ್ರತಿಭಟಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಹೂಗಳನ್ನು ರಸ್ತೆಗೆ ಸುರಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಎಮ್ಮೆಗಳನ್ನು ರಸ್ತೆಗೆ ತಂದು ರೈತರು ಪ್ರತಿಭಟಿಸಿದರು. ಅದೇ ರೀತಿ, ಬೆಳಗಾವಿಯ ಅಥಣಿಯಲ್ಲಿ ಮಳೆಯ ನಡುವೆಯೆ ರೈತರು ಪ್ರತಿಭಟನೆ ನಡೆಸಿದರು. ಹಾಸನದಲ್ಲಿ ಅನ್ನದಾತರು ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು. ಇನ್ನು, ಹಲವೆಡೆ ರಸ್ತೆತಡೆ, ಬಸ್ ತಡೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ದ ಘೋಷೆಣೆಗಳನ್ನು ಕೂಗಿದರು.

ಬಂಧನ: ಬೆಂಗಳೂರಿನ ಮೌರ್ಯ ವೃತ್ತದ ಬಳಿ ಬೆಳ್ಳಂಬೆಳ್ಳಗೆ ಪ್ರತಿಭಟನೆ ನಡೆಸಲು ಮುಂದಾದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತ ಮುಖಂಡರನ್ನು ಪೊಲೀಸರು ಬಂಧಿಸಿ, ವಾಹನದಲ್ಲಿ ಕರೆದೊಯ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಹೊಸದಿಲ್ಲಿಯಲ್ಲಿ ಒಂಭತ್ತು ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಾವು ಶಾಂತಿಯುತ ಹೋರಾಟ ಮಾಡುತ್ತಿದ್ದರೂ ನಮ್ಮನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು ಎಂದರು.

ಮೆಜೆಸ್ಟಿಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಪರ ಹೋರಾಟಗಾರ ಶಿವರಾಮೇಗೌಡ ಸೇರಿದಂತೆ ಹಲವರನ್ನು ಪೊಲೀಸರು ಬೆಳ್ಳಂಬೆಳಗ್ಗೆ ವಶಕ್ಕೆ ಪಡೆದರು.

ಈ ವೇಳೆ ಪ್ರತಿಕ್ರಿಯಿಸಿದ ಸಾ.ರಾ.ಗೋವಿಂದು, ನ್ಯಾಯಯುತ ಬೇಡಿಕೆಗಾಗಿ ರೈತರು ಮಾಡುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನೈತಿಕ ಬೆಂಬಲ ಘೋಷಣೆಯನ್ನು ಬಿಟ್ಟು ಎಲ್ಲರೂ ಬೀದಿಗಿಳಿದು ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಆಗ್ರಹಿಸಿದರು. 

ಅದೇ ರೀತಿ, ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಿಂದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಜನರಿಗೆ ಪ್ರತಿಭಟನೆಯ ಉದ್ದೇಶವೇ ಅರ್ಥವಾದಂತಿಲ್ಲ. ಕೇಂದ್ರ ಸರಕಾರ ಎಲ್ಲವನ್ನು ಖಾಸಗಿಕರಣ ಮಾಡಿದೆ. ಕೃಷಿ ವಲಯವನ್ನು ಕೂಡ ಖಾಸಗೀಕರಣ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ಭಾರತ್ ಬಂದ್ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದ ನುಡಿದರು.

ಇದೇ ವೇಳೆ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಇಂದಿನ ಬಂದ್ ಯಶಸ್ವಿಯಾಗಿದೆ. ಗ್ರಾಮೀಣ ಭಾಗದಲ್ಲಿ ನಮ್ಮ ಬಂದ್‍ಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಬೆಂಗಳೂರಿನ ಜನ ನಮಗೆ ಬೆಂಬಲ ನೀಡಿಲ್ಲ. ಮುಂದಿನ ದಿನಗಳಲ್ಲಿ ಇದರ ಉದ್ದೇಶ ಅವರಿಗೆ ಅರ್ಥವಾಗುತ್ತದೆ ಎಂದರು.

ಒಟ್ಟಾರೆ ರಾಜ್ಯಾದ್ಯಂತ ಹೆಚ್ಚಿನ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಗಡಿಮುಂಗಟ್ಟುಗಳು, ಸಂಚಾರ ಎಂದಿನಂತೆ ಇತ್ತು. ಬಿಜೆಪಿ ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳು ರೈತರೊಂದಿಗೆ ಹೆಜ್ಜೆಹಾಕಿದರು.

ಬೃಹತ್ ಪ್ರತಿಭಟನಾ ಮೆರವಣಿಗೆ

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ದಲಿತ, ಕಾರ್ಮಿಕ, ವಕೀಲರ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಗತ್ ಸಿಂಗ್ ಪೋಸ್ಟರ್

ಸೋಮವಾರ ಭಗತ್ ಸಿಂಗ್ ಅವರ 114ನೆ ಜನ್ಮದಿನ ಹಿನ್ನೆಲೆ ಪ್ರತಿಭಟನೆಯಲ್ಲಿ ಭಗತ್ ಸಿಂಗ್ ಪೋಸ್ಟರ್ ಗಳು ರಾರಾಜಿಸುತಿದ್ದ ದೃಶ್ಯ ಕಂಡುಬಂದಿತು.

ಬಿಗಿ ಪೊಲೀಸ್ ಭದ್ರತೆ

ಭಾರತ್ ಬಂದ್ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News