ಒಂದೇ ಘಟನೆಯ ಬಗ್ಗೆ ಹಲವು ಎಫ್‍ಐಆರ್ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್ ಆದೇಶ

Update: 2021-09-27 13:20 GMT

ಬೆಂಗಳೂರು, ಸೆ.27: ಒಂದೇ ಘಟನೆಯ ಬಗ್ಗೆ ಹಲವು ಎಫ್‍ಐಆರ್ ದಾಖಲಿಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಬಗ್ಗೆ ಪೋಸ್ಟರ್ ಹಾಕಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಹೂಡಿದ್ದ ಎರಡನೆ ಎಫ್‍ಐಆರ್ ಅನ್ನು ರದ್ದುಗೊಳಿಸಿದೆ. 

ಹೊಸಕೋಟೆಯ ಬಿ.ವಿ.ಭೈರೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಹೂಡಿದ್ದ ಎರಡನೆ ಎಫ್‍ಐಆರ್ ರದ್ದು ಮಾಡಿದೆ.

2018ರ ವಿಧಾನಸಭಾ ಚುನಾವಣೆ ವೇಳೆ ಹೊಸಕೋಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಬಗ್ಗೆ ಬಂಟಿಂಗ್ಸ್ ಹಾಕಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎರಡನೆ ಎಫ್‍ಐಆರ್ ದಾಖಲಿಸಲಾಗಿತ್ತು. 

ಒಮ್ಮೆ ಒಂದು ಘಟನೆಯ ಬಗ್ಗೆ ದೂರು ದಾಖಲಾದರೆ, ಅದೇ ಘಟನೆಯ ಬಗ್ಗೆ ದೂರುದಾರರು ಮತ್ತೊಂದು ದೂರನ್ನು ದಾಖಲಿಸಲಾಗದು ಮತ್ತು ದೂರನ್ನು ಮಾರ್ಪಡಿಸಲು ಅವಕಾಶ ನೀಡಲಾಗದು. ಜೊತೆಗೆ ಅದೇ ಘಟನೆ ಬಗ್ಗೆ ಎರಡನೆ ಎಫ್‍ಐಆರ್ ಅಥವಾ ಹಲವು ಎಫ್‍ಐಆರ್‍ಗಳನ್ನು ದಾಖಲಿಸಲೂ ಸಹ ಅವಕಾಶವಿಲ್ಲ. ಅದು ಸುಪ್ರಿಂಕೋರ್ಟ್ ಆದೇಶಕ್ಕೆ ವಿರುದ್ಧವಾಗುತ್ತದೆ. ಜತೆಗೆ ಸಮಾನತೆಯ ಸಿದ್ಧಾಂತಕ್ಕೆ ವ್ಯತಿರಿಕ್ತವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

2018ರ ಎ.18ರಂದು ನಿಸಾರ್ ಆಹಮದ್ ಎಂಬುವರು ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅನಧಿಕೃತವಾಗಿ ಬ್ಯಾನರ್ ಬಂಟಿಂಗ್ ಕಟ್ಟಿದ್ದಾರೆಂದು ದೂರು ನೀಡಿದ್ದರು. ನಂತರ ಹೊಸಕೋಟೆ ನಗರಸಭೆಯ ಆರೋಗ್ಯಾಧಿಕಾರಿ ನುಸ್ರತ್ ಬಾನು, ಬ್ಯಾನರ್‍ಗಳ ತೆರವಿಗೆ ಆದೇಶ ನೀಡಿದ್ದರು. ಆನಂತರ ಬಿಜೆಪಿ ಕಾರ್ಯಕರ್ತರು ದೂರುದಾರರನ್ನು ಅವ್ಯಾಚ್ಯ ಶಬ್ದಗಳಲ್ಲಿ ನಿಂದಿಸಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಈ ಘಟನೆ ಆಧರಿಸಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು ಮತ್ತು ಎರಡು ಎಫ್‍ಐಆರ್ ದಾಖಲು ಮಾಡಲಾಗಿತ್ತು.

ಅರ್ಜಿದಾರರು, ಒಂದೇ ಘಟನೆಯ ಬಗ್ಗೆ ಎರಡು ಎಫ್‍ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News