ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ಸೈ ಜಾಮೀನು ಅರ್ಜಿ ವಜಾ

Update: 2021-09-27 15:03 GMT
ಪಿಎಸ್ಸೈ ಅರ್ಜುನ್

ಚಿಕ್ಕಮಗಳೂರು, ಸೆ.27: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಆರೋಪಿ ಪಿಎಸ್ಸೈ ಅರ್ಜುನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಆದೇಶಿಸಿದ್ದು, ಈ ಮೂಲಕ ಪ್ರಕರಣದ ಆರೋಪದಡಿಯಲ್ಲಿ ಅಮಾನತುಗೊಂಡು ನ್ಯಾಯಾಂಗ ಬಂಧನದಲ್ಲಿರುವ ಗೋಣಿಬೀಡು ಪಿಎಸ್ಸೈಗೆ ಭಾರೀ ಹಿನ್ನೆಡೆಯಾಗಿದೆ.

ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬವರಿಗೆ ಗೋಣಿಬೀಡು ಠಾಣೆಯ ಪಿಎಸ್ಸೈ ಅರ್ಜುನ್ ಕಳೆದ ಮೇ 10ರಂದು ಠಾಣೆಯಲ್ಲಿ ಮೂತ್ರ ಕುಡಿಸಿದ್ದರೆಂದು ಆರೋಪಿಸಲಾಗಿದ್ದು, ಈ ಪ್ರಕರಣದಲ್ಲಿ ಪಿಎಸ್ಸೈ ಹುದ್ದೆಯಿಂದ ಅಮಾನತುಗೊಂಡು ತಲೆಮರೆಸಿಕೊಂಡಿದ್ದ ಆರೋಪಿ ಅರ್ಜುನ್ ಅವರನ್ನು ಇತ್ತೀಚಿಗೆ ಸಿಐಡಿ ಪೊಲೀಸರು ಬಂಧಿಸಿದ್ದರು.

ಬಳಿಕ ಚಿಕ್ಕಮಗಳೂರು ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಈ ಮಧ್ಯೆ ಆರೋಪಿ ಅರ್ಜುನ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪಿಎಸ್ಸೈ ಅರ್ಜುನ್ ಅವರು ಜಾಮೀನು ಪಡೆಯಲು ನಡೆಸಿದ್ದ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News