ಎರಡು ಕೋಟಿ ವೆಚ್ಚ ಮಾಡಿ ಕಾಮಗಾರಿ ಬದಲು: ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಆದೇಶ

Update: 2021-09-27 14:36 GMT

ಬೆಂಗಳೂರು, ಸೆ.27: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲಾರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ(ಎಸ್‍ಟಿಪಿ) ಎರಡು ಕೋಟಿ ರೂಪಾಯಿ ಖರ್ಚು ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ, ಮತ್ತೊಂದು ಪ್ರದೇಶದಲ್ಲಿ ಹೊಸ ಘಟಕ ಸ್ಥಾಪಿಸಲು ಕಾಮಗಾರಿ ಕೈಗೊಂಡ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಎಸ್‍ಟಿಪಿ ಸ್ಥಾಪನೆ ವಿರೋಧಿಸಿ ನಾರಾಯಣ ಬೈರು ಸಾವಂತ್ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹಣ ವೆಚ್ಚ ಮಾಡಿಲ್ಲ ಎಂದು ಹೇಳಲಾಗಿದೆ. ಆದರೆ, ಬೇರೆ ದಾಖಲೆಗಳನ್ನು ಪರಿಶೀಲಿಸಿದರೆ ಹಣ ಖರ್ಚಾಗಿರುವುದು ಗೊತ್ತಾಗುತ್ತಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ, ಹಣ ಖರ್ಚಾಗಿದ್ದರೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ನ.25ಕ್ಕೆ ಮುಂದೂಡಿತು.

ಅಲ್ಲದೇ ಯೋಜನೆಯನ್ನು ಅಲಾರವಾಡದಿಂದ ಹಲಗೆ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದು ಏಕೆ ಎಂಬ ಬಗ್ಗೆ ಪಾಲಿಕೆ ಆಯುಕ್ತರು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ಅಲಾರವಾಡದಲ್ಲಿ ಕಾಮಗಾರಿಗೆ 2.28 ಕೋಟಿ ರೂ.ಖರ್ಚು ಮಾಡಿದ ನಂತರ ಯೋಜನೆ ಸ್ಥಗಿತಗೊಳಿಸಿರುವುದನ್ನು ಆಕ್ಷೇಪಿಸಿದ್ದ ನ್ಯಾಯಪೀಠ, ಏಕೆ ಯೋಜನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು, ಆ 2.28 ಕೋಟಿ ರೂ. ಸರಕಾರದ ಹಣ ವ್ಯರ್ಥವಾಗಲಿಲ್ಲವೇ. ಸಾರ್ವಜನಿಕರ ಹಣವನ್ನು ಹೀಗೆ ಪೊಲು ಮಾಡುವುದು ಎಷ್ಟು ಸೂಕ್ತ, ಘಟಕ ಸ್ಥಾಪನೆಗೆ ಯಾವುದು ಸೂಕ್ತ ಸ್ಥಳ ಎಂಬ ಬಗ್ಗೆ ಪರಿಶೀಲಿಸದೆ ಯೋಜನೆ ಕೈಗೊಳ್ಳಲಾಯಿತೇ, ಆ ಬಗ್ಗೆ ಪಾಲಿಕೆ ವಿವೇಚನೆ ಬಳಸಲಿಲ್ಲವೇ ಎಂದು ಪ್ರಶ್ನಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News