ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ: ಸಿಟಿ ರವಿ

Update: 2021-09-27 15:50 GMT
ಸಿ.ಟಿ.ರವಿ

ಬೆಂಗಳೂರು, ಸೆ. 27: ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್ ಮತ್ತು ಆರೆಸ್ಸೆಸ್ ಒಂದೇ ತರ ಕಾಣುತ್ತಿದೆ. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ. ತಾಲಿಬಾನ್ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ತಾಲಿಬಾನ್ ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು. ತಾಲಿಬಾನ್ ಏನು, ಬಿಜೆಪಿ ಏನು, ಆರೆಸ್ಸೆಸ್ ಏನು ಎಂದು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ನವರು ಎಸ್‍ಡಿಪಿಐ, ಪಿಎಫ್‍ಐ, ಎಂಐಎಂ ಇವರೆಲ್ಲ ಯಾರಿಗೆ ನೆಂಟರು? ನಮಗಂತೂ ಅಲ್ಲ. ನಾವು ಯಾವತ್ತೂ ಮತಕ್ಕಾಗಿ ರಾಜಕಾರಣ ಮಾಡಿಲ್ಲ. ತುಕಡೇ ಗ್ಯಾಂಗ್ ಜೊತೆ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬಿಜೆಪಿಯವರು ಅದಾನಿ, ಅಂಬಾನಿ ಪರ ಎಂದು ಹೇಳುತ್ತಿದ್ದಾರೆ. ಆದರೆ, ಅದಾನಿ-ಅಂಬಾನಿ ನಿನ್ನೆ ಮೊನ್ನೆ ಹುಟ್ಟಿದವರೇ? ಮೋದಿಯವರು ಬಂದ ಮೇಲೆ ಅದಾನಿ, ಅಂಬಾನಿ ಶ್ರೀಮಂತರಾದರೇ? ನಮ್ಮ ಯೋಜನೆಗಳು ಅದಾನಿ, ಅಂಬಾನಿ ಪರ ಇಲ್ಲ.ರೈತರು, ಬಡವರು, ಕೃಷಿ ಕೂಲಿ ಕಾರ್ಮಿಕರ ಪರವಾಗಿವೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

 `ರೈತ ಮುಖಂಡ ನಂಜುಂಡಸ್ವಾಮಿ ಅವರು ಕೃಷಿ ಉತ್ಪನ್ನಗಳನ್ನು ಎಲ್ಲ ಕಡೆ ಮಾರಾಟ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದರು. ಅವರ ಹಳೆಯ ಭಾಷಣ ಮರೆತಂತೆ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಸೇರಿ ರೈತ ನಾಯಕರು ಮಾತನಾಡುತ್ತಿದ್ದಾರೆ. ಕೆಲವರಿಗೆ ಬಿಜೆಪಿ ವಿರೋಧಿಸಿದರೆ ಮಾತ್ರ ತಿಂದ ಅನ್ನ ಅರಗುತ್ತದೆ' ಎಂದು ಟೀಕಿಸಿದರು.

`ಎಪಿಎಂಸಿಯಲ್ಲಿ ಉತ್ತಮ ದರ ಸಿಗುತ್ತಿದ್ದರೆ, ಶೋಷಣೆ ಇಲ್ಲದಿದ್ದರೆ ರೈತರು ಉತ್ಪನ್ನಗಳನ್ನು ಚರಂಡಿಗೆ ಸುರಿಯುವ ಸ್ಥಿತಿ ಬರುತ್ತಿತ್ತೆ? ಉತ್ತಮ ಬೆಲೆ ಸಿಕ್ಕಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ ಎಂದೂ ಅವರು ಕೇಳಿದರು. ರೈತರ ಆದಾಯ ದ್ವಿಗುಣ ಆಗಬಾರದೇ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ, ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ, ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ ಎಂದು ದೂರಿದರು.

ಕೃಷಿ ಉತ್ಪನ್ನಗಳಿಗೆ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸುಧಾರಣೆಗೆ ಅಡ್ಡಗಾಲು ಹಾಕಲು ಷಡ್ಯಂತ್ರವನ್ನು ಕೆಲವರು ಪೂರ್ವಗ್ರಹ ಪೀಡಿತರಾಗಿ, ಇನ್ನೂ ಕೆಲವರು ಅರಿವಿಲ್ಲದೆ ಹಾಗೂ ಮತ್ತೆ ಹಲವರು ಬಿಜೆಪಿಯನ್ನು ವಿರೋಧಿಸುವ ಉದ್ದೇಶದಿಂದ ವಿರೋಧಿಸುತ್ತಿದ್ದಾರೆಯೇ ಹೊರತು, ರೈತರು ಇದನ್ನು ವಿರೋಧಿಸುತ್ತಿಲ್ಲ' ಎಂದು ರವಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇರಲಿಲ್ಲ. ಈಗ 9.75 ಕೋಟಿ ಕೃಷಿಕರಿಗೆ ವರ್ಷಕ್ಕೆ 58 ಸಾವಿರ ಕೋಟಿ ರೂ.ಹಣವನ್ನು ತಲಾ 6 ಸಾವಿರ ರೂ.ನಂತೆ ನೀಡಲಾಗುತ್ತಿದೆ. ರಸಗೊಬ್ಬರ ಸಬ್ಸಿಡಿ ಹೆಚ್ಚಳ, ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಹಣ ಬಿಡುಗಡೆ, ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆ, ಫಸಲ್ ಬಿಮಾ ಯೋಜನೆಯಂಥ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಜಾಣಮರೆವನ್ನು ಪ್ರದರ್ಶಿಸುತ್ತಿದ್ದಾರೆ. ಸುಧಾರಣೆ ತರುವುದೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳಿಂದ ನಡೆದಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News