ಪಂಚಮಸಾಲಿ ಸಮುದಾಯ 2ಎಗೆ ಸೇರ್ಪಡೆಗೆ ಹಿಂದುಳಿದ ಸ್ವಾಮೀಜಿಗಳ ವಿರೋಧ; ಹೋರಾಟ ನಡೆಸಲು ಸಿದ್ಧ: ಬಸವ ಪ್ರಭು ಸ್ವಾಮೀಜಿ

Update: 2021-09-27 18:15 GMT
 2ಎ ಮೀಸಲಾತಿ ಹೋರಾಟ (ಫೈಲ್ ಚಿತ್ರ)

ಬೆಂಗಳೂರು, ಸೆ. 27: ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಪ್ರಬಲ ಜಾತಿಗಳನ್ನು ಸೇರ್ಪಡೆಗೊಳಿಸಬಾರದೆಂದು ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ದಿ ಟ್ರಸ್ಟ್ ಹಾಗೂ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳ ನಿಯೋಗ ಒತ್ತಾಯಿಸಿದೆ.

ಪ್ರೆಸ್‍ಕ್ಲಬ್‍ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ, ತಿಗಳ ಮಹಾಲಕ್ಷ್ಮಿ ಮಠದ ಬಸವ ಪ್ರಭು ಸ್ವಾಮೀಜಿ, ಯಾವುದೇ ಕಾರಣಕ್ಕೂ ಆರ್ಥಿಕ, ಸಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬಾರದು. ಒಂದು ವೇಳೆ ಸಿಎಂ ಹಾಗೂ ಸರಕಾರ ಇದನ್ನು ಹಗುರವಾಗಿ ತೆಗೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದ ಶಕ್ತಿ ಏನೆಂಬುದನ್ನು ತೋರಿದಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅದೇ ರೀತಿ ಎಚ್.ಕಾಂತರಾಜ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆಯ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಹಿಂದುಳಿದ ಜಾತಿಗಳಿಗೆ ಜಾತಿಗೊಂದು ಅಭಿವೃದ್ಧಿ ನಿಗಮ ಮಾಡಬೇಕು. ಮೀಸಲಾತಿ ಸೌಲಭ್ಯವನ್ನು ಅಶಕ್ತರಿಗೆ ಒದಗಿಸಬೇಕೇ ಹೊರತು, ಉಳ್ಳವರಿಗೆ ಅಲ್ಲ ಎಂದು ಪ್ರತಿಪಾದಿಸಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೈದಪ್ಪ ಗುತ್ತೇದಾರ್ ಮಾತನಾಡಿ, ರಾಜ್ಯ ಸರಕಾರ 2020-21ರ ಬಜೆಟ್‍ನಲ್ಲಿ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಅಭಿವೃದ್ದಿ ನಿಗಮಗಳಿಗೆ ತಲಾ 500 ಕೋಟಿ ರೂ.ಬಿಡುಗಡೆಗೊಳಿಸಿದೆ. ಆದರೆ, 197 ಸಮುದಾಯಗಳನ್ನು ಒಳಗೊಂಡ ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ ಕೇವಲ 500 ಕೋಟಿ ರೂ.ನೀಡಿದೆ. ಇದು ಬಹುದೊಡ್ಡ ತಾರತಮ್ಯ. ಇದೀಗ 2ಎ ಮೀಸಲಾತಿಗೆ ಪ್ರಬಲ ಸಮುದಾಯವನ್ನು ಸೇರಿಸಲು ರಾಜ್ಯ ಸರಕಾರ ಮುಂದಾದರೆ ಎಲ್ಲ ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಈಶ್ವರಪ್ಪ ಸ್ವಾಮಿ, ಎನ್.ರಾಮಯ್ಯ ಸ್ವಾಮಿ, ನೀಲಕಂಠಾಚಾರ್ಯ ಸ್ವಾಮೀಜಿ, ಪ್ರಭು ಮಹಾದೇವ ಮೂಡಲಗಿ, ಟ್ರಸ್ಟ್ ಕಾರ್ಯಾಧ್ಯಕ್ಷ ಕೃಷ್ಣ ಸಾ, ಎನ್.ಮಂದಿಪ್, ಸಂಘಟನಾ ಕಾರ್ಯದರ್ಶಿ ಗಳಾದ ವೆಂಕಟರಾವ್ ಜಿ.ಆರ್.ಪ್ರೇಮ್‍ಸಿಂಗ್, ಕನಕ ಗಿರೀಶ್ ಆರ್.ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News