ದಿವ್ಯಾಂಗರಿಗೆ ಶೇ.5ರಷ್ಟು ನಿವೇಶನ ಮೀಸಲಿಡುವ ವಿಚಾರ: ಪ್ರತಿಕ್ರಿಯೆ ನೀಡಲು ಹೈಕೋರ್ಟ್ ಸೂಚನೆ

Update: 2021-09-27 18:04 GMT

ಬೆಂಗಳೂರು, ಸೆ.27: ದಿವ್ಯಾಂಗರಿಗೆ ಶೇ.5ರಷ್ಟು ನಿವೇಶನವನ್ನು ಮೀಸಲಿಡಬೇಕು ಮತ್ತು ಹಂಚಿಕೆಯಾಗುವ ನಿವೇಶನಕ್ಕೆ ರಿಯಾಯಿತಿ ದರ ನಿಗದಿಪಡಿಸುವ ಕುರಿತು 2 ವಾರಗಳಲ್ಲಿ ಉತ್ತರ ನೀಡುವಂತೆ ಹೈಕೋರ್ಟ್, ಬಿಡಿಎಗೆ ಸೂಚನೆ ನೀಡಿದೆ.

ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 
ಅರ್ಜಿದಾರರ ಪರ ವಾದಿಸಿದ ವಕೀಲರು, 2019ರ ಅ.22ರಂದೆ ನ್ಯಾಯಪೀಠ ಬಿಡಿಎಗೆ ತಾನು ಹಂಚಿಕೆ ಮಾಡಲಿರುವ 5 ಸಾವಿರ ನಿವೇಶನಗಳ ಪೈಕಿ ದಿವ್ಯಾಂಗರಿಗೆ ನೀಡಲು ಎಷ್ಟು ನಿವೇಶನಗಳಿವೆ ಮತ್ತು ನಿವೇಶನ ದರದಲ್ಲಿ ರಿಯಾಯಿತಿ ನೀಡುವ ಕುರಿತು ಉತ್ತರ ನೀಡುವಂತೆ ತಿಳಿಸಿತ್ತು. ಆದರೆ, ಬಿಡಿಎ ಈವರೆಗೂ ಉತ್ತರ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಆಗ ಬಿಡಿಎ ಪರ ಹೊಸದಾಗಿ ವಕಾಲತ್ತು ಹಾಕಿರುವ ವಕೀಲ ರಾಜೇಂದ್ರ ಕುಮಾರ್ ಸುಂಗೈ, ನ್ಯಾಯಾಲಯದ ನಿರ್ದೇಶನದ ಬಗ್ಗೆ ಮಾಹಿತಿ ಪಡೆದು ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕೆಂದರು.

ಅದಕ್ಕೆ ನ್ಯಾಯಪೀಠ, ವಿಚಾರಣೆಯನ್ನು ಎರಡು ವಾರ ಮುಂದೂಡಿ, ಅಷ್ಟರಲ್ಲಿ ನ್ಯಾಯಾಲಯ ಹಿಂದೆ ನೀಡಿರುವ ನಿರ್ದೇಶನದ ಪಾಲನೆ ಕುರಿತು ಮಾಹಿತಿಯನ್ನು ಒದಗಿಸಬೇಕು ಎಂದು ಆದೇಶಿಸಿತು.

2016ರಲ್ಲಿ ಸಲ್ಲಿಕೆಯಾಗಿರುವ ಈ ಪಿಐಎಲ್ ನಲ್ಲಿ ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದ್ದರೂ ಸಹ ಬಿಡಿಎ ಉತ್ತರ ನೀಡದೆ ಒಂದಲ್ಲಾ ಒಂದು ಕಾರಣ ನೀಡಿ ವಿಚಾರಣೆಯನ್ನು ಮುಂದೂಡಿಸಿಕೊಂಡು ಬರುತ್ತಲೇ ಇದೆ.

ಅರ್ಜಿದಾರರು ನಿಯಮದಂತೆ ಬಿಡಿಎ ತನ್ನ ಬಡಾವಣೆಗಳಲ್ಲಿ ಶೇ.5ರಷ್ಟು ನಿವೇಶನಗಳನ್ನು ದಿವ್ಯಾಂಗರಿಗೆ ಮೀಸಲಿಡುವಂತೆ ಆದೇಶಿಸಬೇಕು ಮತ್ತು ಆ ರೀತಿ ಹಂಚಿಕೆಯಾಗುವ ನಿವೇಶನಗಳಿಗೆ ರಿಯಾಯಿತಿ ದರ ನಿಗದಿಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News