ಸಿದ್ದರಾಮಯ್ಯ ಹೊಟ್ಟೆಕಿಚ್ಚು ಪಡುವಷ್ಟು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ: ಗೃಹ ಸಚಿವ ಅರಗ ಜ್ಞಾನೇಂದ್ರ
ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೊಟ್ಟೆಕಿಚ್ಚುಪಡುವಷ್ಟು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ತಿಳಿಸಿದರು.
ಆರೆಸ್ಸೆಸ್ ನವರದ್ದು ತಾಲಿಬಾನಿ ಸಂಸ್ಕೃತಿ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಂತಹ ಹಿರಿಯರು ಆಡಿದ ಮಾತಿಗೆ ನಾನೇನು ಹೇಳಲು ಹೋಗಲ್ಲ. ಸಿದ್ದರಾಮಯ್ಯನವರು ಹೊಟ್ಟೆಕಿಚ್ಚು ಪಡುವಷ್ಟು ಈ ಸರ್ಕಾರ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಅನೇಕ ಸಂಗತಿಗಳನ್ನು ಹೇಳಲೇಬೇಕಾಗತ್ತೆ. ಹೇಳುತ್ತಾ ಹೋಗುತ್ತಿದ್ದಾರೆ ಅಷ್ಟೇ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ದೇಶದಲ್ಲಿ ಏನು ಕೆಲಸ ಮಾಡುತ್ತಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯದ ಗೃಹಸಚಿವ ನಾವೆಲ್ಲ ಆರೆಸ್ಸೆಸ್ ನಿಂದ ಬಂದವರು. ನಿನ್ನ ಬದುಕಿಗೂ ದೇಶದ ಹಿತಕ್ಕೂ ಸಂಘರ್ಷ ಬಂದಾಗ ನಿನ್ನ ಬದುಕನ್ನು ಬಲಿಕೊಟ್ಟು ರಾಷ್ಟ್ರ ರಕ್ಷಣೆಗೆ ಮುಂದಾಗಲು ಹೇಳುವಂತಹ ಸಂಘಟನೆ ಇದ್ದರೆ ಆರೆಸ್ಸೆಸ್. ಇದನ್ನು ನಾವು ಪ್ರೀತಿಸುತ್ತೇವೆ ಎಂದು ತಿರುಗೇಟು ನೀಡಿದರು.
ದೇವಾಲಯ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ ಅಧಿಕಾರಿಗಳು ಸರ್ಕಾರದ ನಿರ್ದೇಶನ ಪಡೆಯಬೇಕಾಗಿತ್ತು. ಕೋರ್ಟ್ ಆದೇಶವನ್ನು ಸರಿಯಾಗಿ ಓದಬೇಕಾಗಿತ್ತು. ಈಗ ಪೂರಕವಾದ ಕಾಯ್ದೆ ತಂದಿದ್ದೇವೆ. ಪವಿತ್ರ ಸ್ಥಳಗಳ ರಕ್ಷಣೆ ನಮ್ಮ ಹೊಣೆ ಅದನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.