ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-28 15:20 GMT
ಸಿಎಂ ಬಸವರಾಜ ಬೊಮ್ಮಾಯಿ (File Photo: PTI)

ಬೆಂಗಳೂರು, ಸೆ.28: ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಬಿಜೆಪಿ ಪಕ್ಷವು ಸಾಮೂಹಿಕ ನಾಯಕತ್ವದಡಿಯಲ್ಲಿ ಎದುರಿಸಲಿದ್ದು, ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು ಎಂಬುದರ ಕುರಿತು ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರನ್ನು ಕಳುಹಿಸಿಕೊಡಲಾಗುವುದು ಎಂದರು.

ಇತ್ತೀಚೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಯಾರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ. ವೀಕ್ಷಕರು ಎರಡೂ ಕ್ಷೇತ್ರಗಳ ಸ್ಥಿತಿ ಗತಿಗಳ ಕುರಿತು ಅಧ್ಯಯನ ನಡೆಸಿ ನೀಡುವ ವರದಿಯನ್ನಾಧರಿಸಿ ನಾವು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಜನ ನಮ್ಮ ಜೊತೆ ಇದ್ದಾರೆ ಎಂಬುದು ಇತ್ತೀಚೆಗೆ ನಡೆದಂತಹ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ. ಸಶಕ್ತವಾಗಿರುವ ಸಂಘಟನೆ ಮತ್ತು ಕಾರ್ಯಕರ್ತರ ಪಡೆಯೂ ನಮ್ಮ ಜೊತೆ ಇರುವುದರಿಂದ ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಬಲವಂತ ಮತ್ತು ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದನ್ನು ತಡೆಗಟ್ಟಲು ಕಠಿಣ ಕಾಯ್ದೆ ರೂಪಿಸಲಾಗುವುದು. ಯಾದಗಿರಿಯಲ್ಲಿ ಮತಾಂತರ ನಡೆಸುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಯಾವುದೆ ಕಾರಣಕ್ಕೂ ಬಲವಂತ ಹಾಗೂ ಆಮಿಷದ ಮತಾಂತರ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News